ಸೋನಿಯಾ ವಿರುದ್ಧ ನಾಯ್ಡು, ರೆಡ್ಡಿ ನಿರಶನ
ಹೈದರಾಬಾದ್, ಅ.7: ಕಂಡಲ್ಲಿ ಗುಂಡು ಆದೇಶಕ್ಕೂ ಬೆಚ್ಚದೆ ಸೀಮಾಂಧ್ರ ಜನ ರಸ್ತೆಗಿಳಿದು ಅಖಂಡ ಆಂಧ್ರಕ್ಕಾಗಿ ಹೋರಾಟ ಮುಂದುವರೆಸಿದ್ದಾರೆ. ಆಂಧ್ರ ವಿಭಜನೆಗೆ ವಿರೋಧ ವ್ಯಕ್ತಪಡಿಸಿ ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ದೆಹಲಿಯಲ್ಲಿ ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ನಿರಶನ ಕೂತಿದ್ದಾರೆ. ಇಬ್ಬರ ಟಾರ್ಗೆಟ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ.
ವೈಎಸ್ ಆರ್ ಪಕ್ಷ ಸೇರಿದಂತೆ ಹಲವಾರು ಸಂಘಟನೆಗಳು ಕರೆ ನೀಡಿರುವ ಸೀಮಾಂಧ್ರ ಬಂದ್ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗೊಂದಲದ ನಡುವೆ ತಿರುಪತಿ ಬ್ರಹ್ಮೋತ್ಸವ, ಕರ್ನಾಟಕ ಗಡಿಭಾಗದ ಜನ ಸಾಮಾನ್ಯರ, ಸಣ್ಣ ವ್ಯಾಪಾರಿಗಳ ತತ್ತರ, ಗೊಂದಲದಲ್ಲಿ ಕಾಂಗ್ರೆಸ್, ಹಿಂಸಾಚಾರ ಸ್ವರೂಪ ಪಡೆದ ಬಂದ್, ಕತ್ತಲೆಯಲ್ಲಿ ಮುಳುಗಿದ 13 ಜಿಲ್ಲೆಗಳ ಚಿತ್ರ ಮುಂತಾದ ಘಟನಾವಳಿಗಳ ಸಚಿತ್ರ ವರದಿ ಇಲ್ಲಿದೆ ಓದಿ
ನವದೆಹಲಿ: ತೆಲಂಗಾಣ ರಚನೆ ವಿರೋಧಿಸಿ ತೆಲುಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ಸೋಮವಾರ ಆಮರಣಾಂತ ಉಪವಾಸ ಆರಂಭಿಸಲಿದ್ದಾರೆ.
ಆಂಧ್ರ ವಿಭಜನೆ ವಿರೋಧಿಸಿ ಸೀಮಾಂಧ್ರದ ವಿಜಯನಗರ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ವಿಜಯನಗರ ಪಟ್ಟಣದ ಹಲವೆಡೆ ಕಲ್ಲು ತೂರಾಟ ನಡೆದಿದ್ದು, ಅನೇಕ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದಲ್ಲಿ ಕರ್ಫ್ಯೂ ಹೇರಿದ್ದು, ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದಾರೆ.
ಈ ನಡುವೆ, ತೆಲಂಗಾಣ ರಚನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ವಿದ್ಯುತ್ ಕೇಂದ್ರದ 70 ಸಾವಿರಕ್ಕೂ ಹೆಚ್ಚು ನೌಕರರೂ ಬೆಂಬಲ ವ್ಯಕ್ತಪಡಿಸಿದ್ದರಿಂದ ರಾಜ್ಯದ 13 ಜಿಲ್ಲೆಗಳು ಕತ್ತಲೆಯಲ್ಲಿ ಮುಳುಗಿವೆ. ಮುಂದೆ ಓದಿ...

ಚಂದ್ರಬಾಬು ನಾಯ್ಡು ಹೇಳಿಕೆ
ಇದೊಂದು ರಾಜಕೀಯ ಮ್ಯಾಚ್ ಫಿಕ್ಸಿಂಗ್ . ಕಾಂಗ್ರೆಸ್ ಪಕ್ಷ ಯಾವುದೇ ಸರಿಯಾದ ನೀತಿ ನಿಯಮ ಅನುಸರಿಸದೆ ಕಾನೂನಿಗೆ ವಿರೋಧವಾಗಿ ಆಂಧ್ರಪ್ರದೇಶ ವಿಭಜನೆ ಮಾಡಲಾಗಿದೆ. ರಾಜ್ಯದಲ್ಲಿನ ಈ ಪರಿಸ್ಥಿತಿಗೆ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ನೇರ ಕಾರಣ ಎಂದು ನಾಯ್ಡು ಹೇಳಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಬಂದ್
ನಾನ್ ಗೆಜೆಟೆಡ್ ನೌಕರರು ಕರೆ ನೀಡಿದ್ದ ಮೂರು ದಿನಗಳ ಬಂದ್ ನ ಎರಡನೇ ದಿನವಾದ ಶನಿವಾರ ರಾತ್ರಿ ಏಕಾಏಕಿ ಹಿಂಸಾಚಾರಕ್ಕಿಳಿದ ಕೆಲ ದುಷ್ಕರ್ಮಿಗಳು ಅನೇಕ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಬ್ಯಾಂಕ್ ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ.
ಜತೆಗೆ, ಪೊಲೀಸ್ ಹಾಗೂ ಅನೇಕ ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದಲ್ಲಿ ಕರ್ಫ್ಯೂ ಹೇರಿದ್ದು, ಕಂಡಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿದ್ದರು.ಆದರೆ ಭಾನುವಾರ ಬೆಳಗ್ಗೆ ಕರ್ಫ್ಯೂ ಆದೇಶ ಧಿಕ್ಕರಿಸಿ ಬೀದಿಗಿಳಿದ ಪ್ರತಿಭಟನಾಕಾರರು ಕೋಥಪೇಟ ಹಾಗೂ ಪಲ್ಲಿವೀಥಿಯಲ್ಲಿ ಪೊಲೀಸರ ಜತೆಗೆ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಪೊಲೀಸರು ರಬ್ಬರ್ ಗುಂಡು ಹಾರಿಸಿ, ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಸೋನಿಯಾ ಮೇಲೆ ಕಿಡಿ
ಸೋನಿಯಾ ಗಾಂಧಿ ವಿರುದ್ಧ ನಿತ್ಯ ಹರಿಹಾಯುತ್ತಿರುವ ವೈಎಸ್ಸಾರ್ ಪಕ್ಷದ ಮುಖಂಡ ಜಗನ್ ರೆಡ್ಡಿ, ಕಾಂಗ್ರೆಸ್ ಪಕ್ಷ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದ ಜನರ ಭಾವನೆಗಳ ಜತೆ ಆಟವಾಡುತ್ತಿದೆ. ಇದರಿಂದ ಏನು ಸಾಧ್ಯವಿಲ್ಲ. ಅಖಂಡ ಆಂಧ್ರ ಎಂದಿಗೂ ಬದಲಾಗಲು ಬಿಡುವುದಿಲ್ಲ ಎಂದು ಜಗನ್ ಹೇಳಿದ್ದಾರೆ.

ನಾಯ್ಡು ಪ್ರತಿಭಟನೆ
ಪ್ರತ್ಯೇಕ ರಾಜ್ಯ ರಚನೆ ಖಂಡಿಸಿ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ಸೋಮವಾರದಿಂದ ದೆಹಲಿಯಲ್ಲಿ ನಿರಶನ ಆರಂಭಿಸಲಿದ್ದಾರೆ. ಜಗನ್ ರೆಡ್ಡಿ ಶನಿವಾರವಷ್ಟೇ ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ್ದರು.
ನಾಯ್ಡು ಅವರ ಉಪವಾಸಕ್ಕೆ ಮಿತ್ರ ಪಕ್ಷ ಬಿಜೆಪಿ ಬೆಂಬಲ ನೀಡುವುದೇ ಇಲ್ಲವೇ ಇನ್ನೂ ಸ್ಪಷ್ಟವಾಗಿಲ್ಲ. ಜಗನ್ ಪ್ರಾಬಲ್ಯ ಮುರಿಯುವುದು ಜತೆಗೆ ಕಾಂಗ್ರೆಸ್ ವಿರುದ್ಧ ದನಿ ಎತ್ತುವುದು ನಾಯ್ಡು ಅವರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ನಾಯ್ಡು ಉಪವಾಸ ಕೂಡಾ ರಾಜಕೀಯ ಪ್ರೇರಿತ.

ಕಾಂಗ್ರೆಸ್ ಮುಖಂಡರ ಮೇಲೆ ದಾಳಿ
ಬಂದ್ ವೇಳೆ ಪ್ರತಿಭಟನಾಕಾರರು ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಬಿ. ಸತ್ಯನಾರಾಯಣ ಹಾಗೂ ಅವರ ಕುಟುಂಬದ ಆಸ್ತಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದಾರೆ. ಸತ್ಯನಾರಾಯಣ ಅವರಿಗೆ ಸೇರಿದ ಇಂಜಿನಿಯನಿಯರಿಂಗ್ ಕಾಲೇಜು ಹಾಗೂ ಅವರ ಕುಟುಂಬಕ್ಕೆ ಸೇರಿದ ಕೇಬಲ್ ನೆಟ್ ವರ್ಕ್ ಮೇಲೆ ಕಲ್ಲು ತೂರಿ ಹಾನಿ ಮಾಡಿದ್ದಾರೆ.
ಈ ಹಿಂದೆ ಜಗನ್ ಉಪವಾಸ ಮಾಡಿ ಆಸ್ಪತ್ರೆ ಸೇರಿದ್ದಾಗಲೂ ಇದೇ ರೀತಿ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ನಡೆದಿತ್ತು.

ಕತ್ತಲೆಯಲ್ಲಿ ಸೀಮಾಂಧ್ರ
ರಾಜ್ಯ ವಿಭಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸೀಮಾಂಧ್ರದ ವಿದ್ಯುತ್ ಕೇಂದ್ರಗಳ ನೌಕರರೂ ಕೈ ಜೋಡಿಸಿದ್ದಾರೆ. 70 ಸಾವಿರಕ್ಕೂ ಹೆಚ್ಚು ನೌಕರರು ಭಾನುವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ನೌಕರರ ಮುಷ್ಕರದಿಂದಾಗಿ ವಿಜಯವಾಡ ಉಷ್ಣವಿದ್ಯುತ್ ಸ್ಥಾವರದ ಏಳು ಘಟಕಗಳಲ್ಲಿ ಆರರಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಆಂಧ್ರಪ್ರದೇಶಕ್ಕೆ ಪ್ರತಿ ದಿನ 5 ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಅಗತ್ಯವಿದೆ. ವಿಜಯವಾಡ ಉಷ್ಣವಿದ್ಯುತ್ ಘಟಕವೊಂದರಲ್ಲೇ 1700 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತದೆ
ಯಶವಂತಪುರ ರೈಲು ತಡೆ
ಪ್ರತಿಭಟನಾಕಾರರು ವಿಜಯವಾಡ- ಗುದೂರು ನಡುವೆ ಭಾನುವಾರ ಅನೇಕ ರೈಲುಗಳ ಸಂಚಾರಕ್ಕೂ ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ಯಶವಂತಪುರ- ಹೌರಾ ಎಕ್ಸ್ ಪ್ರೆಸ್ ರೈಲು ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು. ಆದರೆ, ಪೊಲೀಸರ ಮಧ್ಯಪ್ರವೇಶದ ಬಳಿಕ ರೈಲುಗಳ ಸಂಚಾರ ಪುನರ್ ಆರಂಭವಾಯಿತು.

ಸಂಚಾರ ಆಸ್ತವ್ಯಸ್ತ
* ಆಂಧ್ರ ರಸ್ತೆ ಸಾರಿಗೆ, ಖಾಸಗಿ ಬಸ್ ಸಂಚಾರ ವ್ಯವಸ್ಥೆ ಎಲ್ಲೆಡೆ ವ್ಯತ್ಯಯವಾಗಿದೆ. ಕರ್ನಾಟಕದ ಈಶಾನ್ಯ ಸಾರಿಗೆ ಸಂಸ್ಥೆ 7 ಘಟಕಗಳಿಂದ 19 ಬಸ್ ಸಂಚಾರ ಸ್ಥಗಿತಗೊಂಡಿದೆ. ಪ್ರತಿ ನಿತ್ಯ ಸಂಸ್ಥೆಗೆ 2.5 ಲಕ್ಷ ರು ಗೂ ಅಧಿಕ ನಷ್ಟವಾಗಿದೆ.
* ಕೋಲಾರ ಜಿಲೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ಸ್ಥಗಿತ: ತಿರುಪತಿ, ಚಿತ್ತೂರು ಮೂಲಕ ಚೆನ್ನೈ ಪ್ರಯಾಣ ಸ್ಥಗಿತ.
* ಮತ್ರಾಲಯ, ಶ್ರೀಶೈಲ, ಉರುಕುಂದಿ ದೇಗುಲ, ಕರ್ನೂಲ್, ಆದೋನಿ ಕಡೆಗೆ ತೆರಳುವುದು ಕಷ್ಟ
* ತುಮಕೂರಿನ ಪಾವಗಡ ಕಡೆಯಿಂದಲೂ ಖಾಸಗಿ ಬಸ್ ಸಂಚಾರ ಸ್ಥಗಿತ.












Click it and Unblock the Notifications