ಹೈದರಾಬಾದಿನಲ್ಲಿ ಗೋಮಾಂಸ vs ಹಂದಿ ಮಾಂಸ ಉತ್ಸವ ಗಲಭೆ
ಹೈದರಾಬಾದ್, ಡಿ. 10: 'ಬೀಫ್ ಫೆಸ್ಟಿವಲ್ ಮಾಡಬೇಡಿ, ಗೋಮಾತೆ ಪೂಜೆ ಮಾಡಿ' ಎಂದು ಬಿಜೆಪಿ ಶಾಸಕ ಬಂಧನವಾಗಿದೆ. ಬೀಫ್ ರುಚಿ ನೋಡಲು ಬಂದ ವಿದ್ಯಾರ್ಥಿಗಳಿಗೆ ಲಾಠಿ ರುಚಿ ಸಿಕ್ಕಿದೆ. ಮತ್ತೊಂದೆಡೆ ಹಂದಿ ಮಾಂಸದ ವಾಸನೆ ಬಂದಿದೆ. ಒಟ್ಟಾರೆ ಇಲ್ಲಿನ ಪ್ರತಿಷ್ಠಿತ ಉಸ್ಮಾನಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪರಿಸ್ಥಿತಿ ಪ್ರಕ್ಷುಬ್ದವಾಗಿದೆ.
ವಿವಾದಿತ ಗೋಮಾಂಸ ಉತ್ಸವವನ್ನು ಆಯೋಜಿಸಿದ್ದ 8 ಮಂದಿ ಸಂಘಟಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ಸವ ವಿರೋಧಿಸಿದ್ದ ಬಿಜೆಪಿ ಶಾಸಕ ಟಿ.ರಾಜಾಸಿಂಗ್‌ರನ್ನು ಬಂಧಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಘೋಷಿತ ಕರ್ಫ್ಯೂ ಪರಿಸ್ಥಿತಿ ನಿರ್ಮಾಣವಾಗಿದೆ. [ಬೀಫ್ ಫೆಸ್ಟಿವಲ್ ಗೆ ವಿರೋಧ, ವಿವಿಗೆ ಬೆಂಕಿ]

ವಿಶ್ವಮಾನವ ಹಕ್ಕುಗಳ ದಿನವಾದ ಇಂದು ವಿವಿ ಆವರಣದಲ್ಲಿ ಗೋಮಾಂಸ ಉತ್ಸವ (ಬೀಫ್ ಫೆಸ್ಟಿವಲ್) ಆಯೋಜಿಸುವುದಾಗಿ ವಿದ್ಯಾರ್ಥಿಗಳ ಒಂದು ಗುಂಪು ಪ್ರಕಟಿಸಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪ್ರದೇಶದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಅದರೆ, ಮತ್ತೊಂದು ಗುಂಪು ಹಂದಿ ಮಾಂಸದ ಉತ್ಸವಕ್ಕೆ ಮುಂದಾಯಿತು.
ಗೋಮಾಂಸ ಉತ್ಸವಕ್ಕೆ ಪರ್ಯಾಯವಾಗಿ ಹಂದಿಮಾಂಸ ಉತ್ಸವ (ಪೋರ್ಕ್ ಫೆಸ್ಟಿವಲ್) ನಡೆಸುವುದಾಗಿ ಇನ್ನೊಂದು ಗುಂಪು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಬಣಗಳ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದ್ದಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ವಿವಿ ಆವರಣದಲ್ಲಿ ಯಾವುದೇ ರೀತಿಯ ಉತ್ಸವ ನಡೆಸಲು ಬಿಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಘಟನೆಗಳೂ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಘೋಷ್‌ಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾಸಿಂಗ್‌ನನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ರಾಮ್ ಭೂಪಾಲ್‌ರಾವ್ ತಿಳಿಸಿದ್ದಾರೆ.












Click it and Unblock the Notifications