ಭೀಕರ ಅಪಘಾತದಲ್ಲಿ ಎನ್‌ಟಿಆರ್ ಮೊಮ್ಮಗನ ಸಾವು
ಹೈದರಾಬಾದ್, ಡಿ. 6 : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ಖ್ಯಾತ ನಟ ದಿ.ಎನ್ ಟಿ ರಾಮರಾವ್ ಅವರ ಮೊಮ್ಮಗ ಚಿತ್ರನಿರ್ಮಾಪಕ ನಂದಮೂರಿ ಜಾನಕಿರಾಮ್ ಅವರು ನಲಗೊಂಡ ಜಿಲ್ಲೆಯ ಅಕುಪಮುಲ ಕ್ರಾಸ್ ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಹೈದರಾಬಾದ್ ವಿಜಯವಾಡಾ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಾಜಿ ಸಂಸದ ಮತ್ತು ಖ್ಯಾತ ನಟ ಹರಿಕೃಷ್ಣ ಅವರ ಮಗ ಆಗಿರುವ ಜಾನಕಿರಾಮ ಅವರು ಚಲಾಯಿಸುತ್ತಿದ್ದ ಟಾಟಾ ಸಫಾರಿ ವಾಹನ ಟ್ರಾಕ್ಟರಿಗೆ ಡಿಕ್ಕಿ ಹೊಡೆದಿದೆ. ಅವರು ವಿಜಯವಾಡಾದಿಂದ ಹೈದರಾಬಾದ್ ಗೆ ಸಾಗುತ್ತಿತ್ತು.

ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಾಕ್ಟರಿಗೆ ಟಾಟಾ ಸಫಾರಿ ಗುದ್ದಿದ ಪರಿಣಾಮ ಜಾನಕಿರಾಮ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಕೂಡಲೆ ಆಸ್ಪತ್ರೆಗೆ ಸಾಗಿಸಿದರೂ ಅವರು ಬದುಕುಳಿಯಲಿಲ್ಲ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ತೆಲುಗಿನ ಖ್ಯಾತ ನಟ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಅವರ ಸಹೋದರರಾಗಿರುವ ಜಾನಕಿರಾಮ್ ಅವರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ. ಕಾಕತಾಳಿಯವೆಂದರೆ, ಇದೇ ಸ್ಥಳದಲ್ಲಿ ಜ್ಯೂ.ಎನ್‌ಟಿಆರ್ ಅವರು ಕೂಡ ಅಪಘಾತಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.












Click it and Unblock the Notifications