ತಪ್ಪಿನ ಅರಿವಾಗಿ ಅಮೃತಾ ಕ್ಷಮೆ ಕೇಳಲು ಬಯಸಿದ್ದ ಮಾರುತಿರಾವ್!
ಹೈದರಾಬಾದ್, ಮಾರ್ಚ್ 11 : ಪುತ್ರಿ ದಲಿತ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ಅಳಿಯನನ್ನು ಕೊಲ್ಲಿಸಿದ್ದ ಮಾರುತಿರಾವ್ ಜೈಲು ಸೇರಿದ ಮೇಲೆ ಬದಲಾಗಿದ್ದರು. ಪುತ್ರಿಯ ಕ್ಷಮೆ ಕೇಳಲು ಮುಂದಾಗಿದ್ದಾರೆ. ಆದರೆ, ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Recommended Video
ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಖೈರತಾಬಾದ್ ಆರ್ಯವೈಶ್ಯ ಭವನದಲ್ಲಿ ಶನಿವಾರ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಶವ ಪತ್ತೆಯಾಗಿತ್ತು.
ಮಾರುತಿರಾವ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಪ್ರಣಯ್ ಪೆರುಮಲ್ಲಾ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ 10 ದಿನದಲ್ಲಿ ಆರಂಭವಾಗಬೇಕಿತ್ತು. ಈ ಪ್ರಕರಣದಲ್ಲಿ ಶಿಕ್ಷೆಯಾಗುವುದು ಖಚಿತ ಎಂದು ತಿಳಿದ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಮಾರುತಿರಾವ್‌ಗೆ ನೆಮ್ಮದಿ ಇರಲಿಲ್ಲ. ಪ್ರಣಯ್ ಪೆರುಮಲ್ಲಾ ವಿವಾಹ, ಹತ್ಯೆ ಪ್ರಕರಣದ ಬಳಿಕ ಮಗಳು ಅಮೃತಾ ಜೊತೆಗಿನ ಸಂಬಂಧ ಹಳಸಿತ್ತು. ಆದರೆ, ತಂದೆ ತನ್ನ ತಪ್ಪನ್ನು ಒಪ್ಪಿಕೊಂಡು ಮಗಳ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು.

ತಾನು ಮಾಡಿದ ತಪ್ಪಿನ ಅರಿವಾಗಿತ್ತು
2018ರ ಸೆಪ್ಟೆಂಬರ್ 14ರಂದು ಮಾರುತಿರಾವ್ ಅಳಿಯ ಪ್ರಣಯ್ ಪೆರುಮಲ್ಲಾ ಹತ್ಯೆ ನಡೆದಿತ್ತು. ಕೆಲವೇ ದಿನಗಳಲ್ಲಿ ಇದು ಮರ್ಯಾದಾ ಹತ್ಯೆ, ಹತ್ಯೆಗೆ ಸುಪಾರಿ ಕೊಟ್ಟಿದ್ದು ಮಾರುತಿರಾವ್ ಎಂಬುದು ಬಯಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಜೈಲು ಸೇರಿದ ಮೇಲೆ ಅವರಿಗೆ ತಪ್ಪಿನ ಅರಿವಾಗಿತ್ತು. ಮಗಳ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು.

ಮಧ್ಯವರ್ತಿಗಳನ್ನು ಕಳಿಸಿದ್ದರು
ಮಾಡಿದ ಎಲ್ಲಾ ತಪ್ಪಿನ ಅರಿವಾಗಿದ್ದ ಮಾರುತಿರಾವ್ ಪುತ್ರಿ ಅಮೃತಾ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು. ಜೈಲಿನಲ್ಲಿದ್ದಾಗಲೇ ಇದಕ್ಕಾಗಿ ಅಮೃತಾ ಜೊತೆ ಮಾತನಾಡಲು ಮಧ್ಯವರ್ತಿಗಳನ್ನು ಕಳಿಸಿದ್ದರು. ಆದರೆ, ಅಮೃತಾ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮಾರುತಿರಾವ್ ಇದರಿಂದಾಗಿ ನೊಂದು ಹೋಗಿದ್ದರು.

ಶಿಕ್ಷೆಯ ಭಯದಿಂದ ಆತ್ಮಹತ್ಯೆ
ಪ್ರಣಯ್ ಪೆರುಮಲ್ಲಾ ಹತ್ಯೆ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ 10 ದಿನದಲ್ಲಿ ಆರಂಭವಾಗುತ್ತಿತ್ತು. ಈ ಪ್ರಕರಣದಲ್ಲಿ ಶಿಕ್ಷೆಯಾಗುವುದು ಖಚಿತ ಎಂದು ತಿಳಿದಿದ್ದ ಮಾರುತಿರಾವ್ ಅಸಹಾಯಕರಾಗಿ ನೊಂದು ಹೋಗಿದ್ದರು. ಪುತ್ರಿಯ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದರು.

ಆಸ್ತಿಯನ್ನು ಹಂಚಲು ಬಯಸಿದ್ದರು
ಆಂಧ್ರಪ್ರದೇಶದ ವಿರ್ಯಾಲಗೂಡು ನಿವಾಸಿ ಮಾರುತಿರಾವ್ ಹೈದರಾಬಾದ್ ಮತ್ತು ವಿರ್ಯಾಲಗೂಡು ಸುತ್ತ-ಮುತ್ತ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದರು. ತಮ್ಮ ಆಸ್ತಿಯನ್ನು ಪತ್ನಿ ಗಿರಿಜಾ ಮತ್ತು ಪುತ್ರಿ ಅಮೃತಾಗೆ ಸಮವಾಗಿ ಹಂಚಲು ಅವರು ಬಯಸಿದ್ದರು. ಆದರೆ, ಪ್ರಣಯ್ ಹತ್ಯೆ ಬಳಿಕ ಅಮೃತಾ ತಂದೆ ಮನೆ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದರು.

ಭಾವನಾತ್ಮಕ ಸಂದೇಶ ಬರೆದಿಟ್ಟಿದ್ದ ತಂದೆ
ಆರ್ಯವೈಶ್ಯ ಭವನದಲ್ಲಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪೊಲೀಸರಿಗೆ ಡೆತ್ ನೋಸ್ ಸಿಕ್ಕಿತ್ತು. ಅದರಲ್ಲಿನ ಬರಹದಲ್ಲಿ ಪತ್ನಿ ಗಿರಿಜಾ ಬಳಿ ಕ್ಷಮೆ ಕೋರಿದ್ದ ಮಾರುತಿರಾವ್ ತಾಯಿಯ ಬಳಿ ಹೋಗುವಂತೆ ಪುತ್ರಿ ಅಮೃತಾಳಿಗೆ ಸಂದೇಶ ನೀಡಿದ್ದರು. ಆದರೆ, ಅಮೃತಾ ತಂದೆಯ ಶವದ ಅಂತಿಮ ದರ್ಶನಕ್ಕೆ ಬಂದಿದ್ದಾಗ ಸಂಬಂಧಿಕರು ಅಡ್ಡಿಪಡಿಸಿದ್ದರು. ಇದರಿಂದಾಗಿ ದರ್ಶನ ಸಿಗದೇ ಅಮೃತಾ ಮಗುವಿನ ಜೊತೆ ವಾಪಸ್ ಹೋಗಿದ್ದರು.












Click it and Unblock the Notifications