ಹೊಸ ಸಂವಿಧಾನ ಬರೆಯಬೇಕು, ಬಿಜೆಪಿಯನ್ನು ಬಂಗಾಳ ಕೊಲ್ಲಿಯಲ್ಲಿ ಎಸೆಯಬೇಕು: ಕೆಸಿ ರಾವ್
ಹೈದರಾಬಾದ್ ಫೆಬ್ರವರಿ 2: ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ವಿರುದ್ಧ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ತೀವ್ರ ವಾಗ್ದಾಳಿ ಮಾಡಿದ್ದಾರೆ. ಬಜೆಟ್‌ನಲ್ಲಿ ಮಂಡಿಸಲಾದ ನದಿಗಳ ಜೋಡಣೆ ಬಗ್ಗೆ ಕೆಸಿ ರಾವ್ ಧ್ವನಿ ಎತ್ತಿದ್ದಾರೆ. ದೇಶದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ ಸುಮಾರು 38-40 ಕೋಟಿ ಇತ್ತು. ಆದರೆ ಕೇಂದ್ರ ಸರ್ಕಾರ ಅವರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಕೇವಲ 12,800 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ತೆಲಂಗಾಣ ಎಸ್‌ಸಿ ಎಸ್‌ಟಿ ಉಪ ಯೋಜನೆಗೆ ಮೀಸಲಿಟ್ಟದ್ದಕ್ಕಿಂತ ಕಡಿಮೆಯಾಗಿದೆ ಎಂದು ಬುಧವಾರ ಕೆ ಚಂದ್ರಶೇಖರ ರಾವ್ ಕೇಂದ್ರ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.
"ದೇಶದಲ್ಲಿ ಜನರ ಸ್ಥಿತಿ ಕರುಣಾಜನಕವಾಗಿದೆ. ತೆಲಂಗಾಣವು ದಲಿತ ಬಂಧು ಮತ್ತು ಇತರ ಯೋಜನೆಗಳಿಗೆ ಮೀಸಲಿಡುವುದರ ಜೊತೆಗೆ ಎಸ್‌ಸಿ ಮತ್ತು ಎಸ್‌ಟಿ ಉಪ ಯೋಜನೆಗಳಿಗೆ 33,611 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ" ಎಂದು ಅವರು ಗಮನಸೆಳೆದರು. ಕಳೆದ ಎಂಟು ವರ್ಷಗಳಲ್ಲಿ, ತೆಲಂಗಾಣವು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಕೇವಲ 42,000 ಕೋಟಿಗಳನ್ನು ಪಡೆದಿದೆ ಎಂದು ಅವರು ನೆನಪಿಸಿದರು.

ಬಜೆಟ್ ವಿರುದ್ಧ ಕೆಸಿ ರಾವ್ ಕಿಡಿ
ರಾಜ್ಯಗಳ ಒಪ್ಪಿಗೆ ಪಡೆಯದೆ ಕೃಷ್ಣಾ, ಗೋದಾವರಿ ಮತ್ತು ಕಾವೇರಿ ನದಿಗಳನ್ನು ಜೋಡಿಸುವ ಯೋಜನೆಗಳ ಕುರಿತು ಕೇಂದ್ರದ ಘೋಷಣೆಯಲ್ಲಿ ಚಂದ್ರಶೇಖರ ರಾವ್ ತಪ್ಪು ಕಂಡುಕೊಂಡಿದ್ದಾರೆ. ಇದನ್ನು ಸಹಸ್ರಮಾನದ ಹಾಸ್ಯ ಎಂದು ಬಣ್ಣಿಸಿದ ಅವರು, ಮೋದಿ ಸರ್ಕಾರವು ನದಿಗಳ ಜೋಡಣೆಯ ನೀತಿಯನ್ನು ಮತ್ತು ಅದಕ್ಕೆ ಅನುಕೂಲವಾಗುವಂತೆ ಕೇಂದ್ರದ ಅಧಿಕಾರವನ್ನು ವಿವರಿಸಬೇಕು ಎಂದು ಒತ್ತಾಯಿಸಿದರು. "ಗೋದಾವರಿ ನದಿ ನೀರಿನ ಮೇಲೆ ಗೋದಾವರಿ ಹರಿಯುವ ಆಯಾ ರಾಜ್ಯಗಳು ಎಲ್ಲಾ ಹಕ್ಕುಗಳನ್ನು ಹೊಂದಿವೆ ಎಂದು ಬಚಾವತ್ ಟ್ರಿಬ್ಯೂನಲ್ ತೀರ್ಪು ಇದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಸಮಾನವಾದ ಟ್ರಿಬ್ಯೂನಲ್ ತೀರ್ಪನ್ನು ನೀವು ಹೇಗೆ ಉಲ್ಲಂಘಿಸುತ್ತೀರಿ? ಎಂದು ಪ್ರಶ್ನಿಸಿದರು.
ಹೆಚ್ಚುವರಿ ನೀರು ಘೋಷಣೆ ಮಾಡದೆ ನದಿ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಕೃಷ್ಣಾ ಮತ್ತು ಗೋದಾವರಿ ಎರಡೂ ನದಿಗಳ ಹೆಚ್ಚುವರಿ ನೀರಿನ ಬಗ್ಗೆ ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ತೀರ್ಮಾನಕ್ಕೆ ಬಂದಿದೆ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು. ಹೆಚ್ಚುವರಿ ನೀರು ಸಮರ್ಪಕವಾಗಿ ಲಭ್ಯವಿದ್ದರೆ, ತೆಲಂಗಾಣ ಸರ್ಕಾರ ಪ್ರಸ್ತಾಪಿಸಿರುವ ನೀರಾವರಿ ಯೋಜನೆಗಳಿಗೆ ಕೇಂದ್ರ ಏಕೆ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ವಿವರಣೆಗಾಗಿ ಕೇಂದ್ರಕ್ಕೆ ಕೆಸಿ ರಾವ್ ಒತ್ತಾಯ
"ನಾವು ಎಲ್ಲಾ ವರದಿಗಳನ್ನು ಸಂಬಂಧಿತ ದಾಖಲೆಗಳೊಂದಿಗೆ ಸಲ್ಲಿಸಿದ್ದೇವೆ, ಆದರೆ ಕೇಂದ್ರವು ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ. ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿ ರಾಜ್ಯಗಳನ್ನು ಬೆದರಿಸಲು ಪ್ರಯತ್ನಿಸದಿದ್ದರೆ, ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆಯಿಲ್ಲದೆ ಕೇಂದ್ರವು ನದಿಗಳ ಜೋಡಣೆಯನ್ನು ಹೇಗೆ ಕೈಗೆತ್ತಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಕೇಂದ್ರದ ಕೆಟ್ಟ ನೀರಿನ ನೀತಿಗಳು ಮತ್ತು ಅಜ್ಞಾನದ ಆಡಳಿತದಿಂದಾಗಿ ರಾಜ್ಯಗಳು ಮತ್ತು ರಾಷ್ಟ್ರದ ಹಲವಾರು ಭಾಗಗಳ ನಡುವೆ ನೀರಿನ ಯುದ್ಧಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ವಿಮಾ ಕಂಪನಿಗಳನ್ನು ಮೆಚ್ಚಿಸುವ ಪ್ರಯತ್ನ
ಕೋವಿಡ್ -19 ರ ಪ್ರತಿಕೂಲ ಪರಿಣಾಮದ ಹೊರತಾಗಿಯೂ, ಕೇಂದ್ರ ಸರ್ಕಾರವು ಆರೋಗ್ಯ ಮೂಲಸೌಕರ್ಯಕ್ಕಾಗಿ ಬಜೆಟ್ ಹಂಚಿಕೆಗಳನ್ನು ಹೆಚ್ಚಿಸಲಿಲ್ಲ ಎಂದು ಅವರು ಹೇಳಿದರು. ಜಲಶಕ್ತಿ ಮಿಷನ್ ಅಡಿಯಲ್ಲಿ ಟ್ಯಾಪ್ ವಾಟರ್ ಸಂಪರ್ಕ ನೀಡಲು 60,000 ಕೋಟಿ ರೂ.ಗಳ ಹಂಚಿಕೆಯನ್ನು 'ಬೋಗಸ್' ಎಂದು ಕರೆದಿದ್ದಾರೆ. ಕೇಂದ್ರವು ಕಳೆದ ಬಜೆಟ್‌ನಲ್ಲಿ ರೂ 2.11 ಲಕ್ಷ ಕೋಟಿಯಿಂದ ರೂ 65,000 ಕೋಟಿಗಳಷ್ಟು ಆಹಾರ ಸಬ್ಸಿಡಿಯನ್ನು ರೂ 1.45 ಲಕ್ಷ ಕೋಟಿಗೆ ಇಳಿಸಿದೆ ಎಂದು ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಯಾವುದೇ ಭರವಸೆ ಇಲ್ಲ ಎಂದರು.
ಏರ್ ಇಂಡಿಯಾ ಮಾರಾಟದಿಂದ ನಷ್ಟವಾಗಿದೆ ಎಂದು ಉಲ್ಲೇಖಿಸಿದ ಕೇಂದ್ರವು ಈಗ ಭಾರತೀಯ ಜೀವ ವಿಮಾ ನಿಗಮವು ಭಾರಿ ಲಾಭ ಗಳಿಸುತ್ತಿದ್ದರೂ ನಾಚಿಕೆಯಿಲ್ಲದೆ ಏಕೆ ಮಾರಾಟ ಮಾಡುತ್ತಿದೆ ಎಂಬುದನ್ನು ವಿವರಿಸಬೇಕು ಎಂದು ಅವರು ಒತ್ತಾಯಿಸಿದರು. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ವಿಮಾ ಕಂಪನಿಗಳನ್ನು ಮೆಚ್ಚಿಸುವ ಪ್ರಯತ್ನ ಎಂದು ಆರೋಪ ಮಾಡಿದರು.

'ಉತ್ತಮ ನಾಯಕತ್ವ ಬದಲಾವಣೆಯ ಅಗತ್ಯತೆ ಇದೆ'
ದೇಶದಲ್ಲಿ ಹೊಸ ಸಂವಿಧಾನ ರಚನೆಗೆ ತೆಲಂಗಾಣ ಮುಖ್ಯಮಂತ್ರಿ ಕೆಸಿ ರಾವ್ ಆಗ್ರಹಿಸಿದ್ದಾರೆ. ದೇಶದಲ್ಲಿ ಹೊಸ ಚಿಂತನೆ, ಹೊಸ ಸಂವಿಧಾನ ಬರಬೇಕು. ದೇಶದಲ್ಲಿ ಉತ್ತಮ ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ನಾವು ಮುಂಬೈಗೆ ತೆರಳುತ್ತಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದೇವೆ. ಕೇಂದ್ರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯಬೇಕು. ಅವರನ್ನು ಬಂಗಾಳಕೊಲ್ಲಿಯಲ್ಲಿ ಎಸೆಯಬೇಕು. ನಾವು ಶಾಂತವಾಗಿ ಕುಳಿತುಕೊಳ್ಳದೇ ದೇಶಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ. ಇದು ಪ್ರಜಾಪ್ರಭುತ್ವ ಪ್ರಧಾನಿಯವರೇ ಎಲ್ಲಾ ಅಲ್ಲ ಎಂದು ಕಿಡಿಕಾರಿದ್ದಾರೆ.

ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ನಿರಾಸೆ ತಂದ ಬಜೆಟ್
ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದಾಗ, ಕೆಸಿಆರ್ ಇದು ನಿಷ್ಪ್ರಯೋಜಕ ಮತ್ತು ಉದ್ದೇಶರಹಿತ ಬಜೆಟ್ ಎಂದು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಯಾವುದೇ ನಿರ್ದೇಶನ ಅಥವಾ ಉದ್ದೇಶವನ್ನು ತೋರಿಸುವುದಿಲ್ಲ. ಇದು ನಿಷ್ಪ್ರಯೋಜಕ ಮತ್ತು ಉದ್ದೇಶರಹಿತ ಬಜೆಟ್ ಎಂದು ಹೇಳಿದರು. ಅಷ್ಟೇ ಅಲ್ಲ, ನಿರ್ಮಲಾ ಸೀತಾರಾಮನ್ ಅವರ ಭಾಷಣ ಟೊಳ್ಳು ಮತ್ತು ಪದಗಳ ಜಂಜಾಟ ಎಂದು ಟೀಕಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ತನ್ನನ್ನು ತಾನೇ ಹೊಗಳಿಕೊಂಡಿದೆ ಎಂದ ಅವರು, ಸಾಮಾನ್ಯ ಜನರು ಖಿನ್ನತೆಯತ್ತ ಸಾಗಿರುವುದು ಸತ್ಯ ಎಂದು ಕಿಡಿಕಾರಿದ್ದಾರೆ.
ಈ ಬಜೆಟ್ ಸಾಮಾನ್ಯ ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಸಾಕಷ್ಟು ನಿರಾಸೆ ಮೂಡಿಸಿದೆ ಎಂದು ಕೆಸಿಆರ್ ಹೇಳಿದರು. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ದುರದೃಷ್ಟಕರ. ಸಂಬಳದಾರರು ಮತ್ತು ಉದ್ಯಮಿಗಳು ಇದಕ್ಕಾಗಿ ಸಾಕಷ್ಟು ನಿರೀಕ್ಷಿಸುತ್ತಿದ್ದರು. ಸರ್ಕಾರವು ಈ ಬಜೆಟ್‌ನೊಂದಿಗೆ ದೇಶದ ಸಾರ್ವಜನಿಕ ಆರೋಗ್ಯ ಮತ್ತು ಇತರ ಮೂಲಸೌಕರ್ಯಗಳನ್ನು ಕಡೆಗಣಿಸಿದೆ. ಇದು ದುರದೃಷ್ಟಕರ ಎಂದು ಹರಿಹಾಯ್ದಿದ್ದಾರೆ.












Click it and Unblock the Notifications