ಭಾರಿ ಮಳೆಗೆ ತತ್ತರಿಸಿದ ಹೈದರಾಬಾದ್: ಯೆಲ್ಲೋ ಅಲರ್ಟ್ ನೀಡಿದ ಹವಾಮಾನ ಇಲಾಖೆ
ಹೈದರಾಬಾದ್, ಜುಲೈ 23: ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ನೀಡಿದೆ. ನೀರು ನಿಲ್ಲುವುದರಿಂದ ವಿವಿಧ ಸ್ಥಳಗಳಲ್ಲಿ ಭಾರಿ ಟ್ರಾಫಿಕ್ ದಟ್ಟಣೆ ಉಂಟಾಗುವ ಸಾಧ್ಯತೆಯಿರುವುದರಿಂದ ಜನರು ಮನೆಯೊಳಗೆ ಇರುವಂತೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ಒತ್ತಾಯಿಸಿದ್ದಾರೆ.
ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದ್ದು, ನಗರ ಮತ್ತು ರಾಜ್ಯದ ಇತರೆಡೆಗಳಲ್ಲಿ ಹಲವಾರು ಸ್ಥಳಗಳಲ್ಲಿ ಜಲಾವೃತವಾಗಿದೆ. ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿರುವ ಘಟನೆಗಳು ನಡೆದಿವೆ.
ಹೈದರಾಬಾದ್ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಜಿಹೆಚ್‌ಎಂಸಿ) ಸಿಬ್ಬಂದಿ ರಸ್ತೆ, ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರಹಾಕುವ ಕೆಲಸದಲ್ಲಿದ್ದಾರೆ ಎಂದು ನಾಗರಿಕ ಮಂಡಳಿಯ ಮೂಲಗಳು ತಿಳಿಸಿವೆ. ಮಳೆನೀರು ಚರಂಡಿಗಳಲ್ಲಿ ಹೂಳು ತೆಗೆಯುವ ಮತ್ತು ಬಿದ್ದ ಮರಗಳನ್ನು ತೆಗೆಯುವ ಕೆಲಸವೂ ನಡೆಯಿತು.
ಖಮ್ಮಂನಲ್ಲಿ 80 ಮಿಲಿ ಮೀಟರ್ ಮಳೆಯಾಗಿದ್ದರೆ, ನಲ್ಗೊಂಡದಲ್ಲಿ ಸಂಜೆಯವರೆಗೆ 25 ಮಿ.ಮೀ ಮಳೆಯಾಗಿದೆ. ಭಾರಿ ಮಳೆಯ ನಂತರ, ನಗರದ ಅಮೀರಪೇಟ್, ಕುಕಟ್‌ಪಲ್ಲಿ, ಬೇಗಂಪೇಟ್ ಮತ್ತು ಕುತ್ಬುಲ್ಲಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಲಾವೃತವಾಗಿದೆ.

ಹೈದರಾಬಾದ್ ನಗರದಲ್ಲಿ ದಾಖಲೆಯ ಮಳೆ
ಹೈದರಾಬಾದ್‌ನಲ್ಲಿ 100 ಮಿಲಿ ಮೀಟರ್‌ಗೂ ಅಧಿಕ ಮಳೆಯಾಗಿದೆ. ಹವಾಮಾನ ಕಚೇರಿಯ ಪ್ರಕಾರ, ಹೈದರಾಬಾದ್‌ನ ಹಫೀಜ್‌ಪೇಟ್‌ನಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ 103.3 ಮಿಲಿ ಮೀಟರ್ ಮಳೆಯಾಗಿದೆ, ನಂತರ ಜೀಡಿಮೆಟ್ಲಾದಲ್ಲಿ 102.5 ಮಿಲಿ ಮೀಟರ್ ಮಳೆಯಾಗಿದೆ ಎಂದು ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿ ಶುಕ್ರವಾರ ಬೆಳಗ್ಗೆ 8:30 ರಿಂದ ರಾತ್ರಿ 8 ರ ನಡುವಿನ ಮಳೆಯ ಪ್ರಮಾಣವನ್ನು ಉಲ್ಲೇಖಿಸಿದೆ.
ಭಾರಿ ಮಳೆಯ ನಂತರ ಜಗ್ತಿಯಾಲ್ ಮತ್ತು ಇತರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ನದಿಗಳು ಮತ್ತು ಇತರ ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ನೀರು ರಸ್ತೆಗಳ ಮೇಲೆ ಹರಿಯಿತು.

ಆಗಸ್ಟ್ ತಿಂಗಳಲ್ಲಿ ಮಳೆ ಕಡಿಮೆ ಸಾಧ್ಯತೆ
ಭಾರತದಲ್ಲಿ ಮುಂಗಾರು ಮಳೆ ಆಗಸ್ಟ್ ತಿಂಗಳಿನಿಂದ ಕಡಿಮೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಋಣಾತ್ಮಕ ಹಿಂದೂ ಮಹಾಸಾಗರ ದ್ವಿಧ್ರುವಿ ಎಂದು ಕರೆಯಲ್ಪಡುವ ಪ್ರತಿಕೂಲ ವಾತಾವರಣದ ವಿದ್ಯಮಾನವು ಆಗಸ್ಟ್‌ನಿಂದ ಅಭಿವೃದ್ಧಿಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತದ ಮೇಲೆ ಮುಂಗಾರು ಮಳೆಯು ಮುಂದಿನ ತಿಂಗಳಿನಿಂದ ಸ್ವಲ್ಪ ಕಡಿಮೆಯಾಗಬಹುದು ಎಂದು ಹೇಳಿದೆ.
ದ್ವಿಧ್ರುವಿಯು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಮತ್ತು ಪೂರ್ವದಲ್ಲಿ ಬಂಗಾಳ ಕೊಲ್ಲಿಯ ಹಿಂದೂ ಮಹಾಸಾಗರದ ತಾಪಮಾನದ ನಡುವಿನ ವ್ಯತ್ಯಾಸವಾಗಿದೆ. ತಟಸ್ಥ ದ್ವಿಧ್ರುವಿಯು ಮಾನ್ಸೂನ್ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಋಣಾತ್ಮಕ ದ್ವಿಧ್ರುವಿ ಮಳೆಯ ಪ್ರಮಾಣವನ್ನು ಕಡಿಮೆ ಮಾಡಲಿದೆ.

ಹವಾಮಾನದ ಮೇಲೆ ಲಾ ನಿನಾ ಪ್ರಭಾವ
ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಲಾ ನಿನಾ ಪರಿಸ್ಥಿತಿಗಳು ಮುಂದುವರಿಯುವ ಶೇಕಡ 45ರಷ್ಟು ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಲಾ ನಿನಾ ಎಂಬುದು ಕೇಂದ್ರ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಸಾಗರದಲ್ಲಿನ ಮೇಲ್ಮೈ ತಾಪಮಾನದ ದೊಡ್ಡ ಪ್ರಮಾಣದ ತಂಪಾಗಿಸುವಿಕೆಯಾಗಿದ್ದು, ಉಷ್ಣವಲಯದ ವಾತಾವರಣದ ಪರಿಚಲನೆ, ಒತ್ತಡ ಮತ್ತು ಮಳೆಯ ಬದಲಾವಣೆಗಳೊಂದಿಗೆ ಸೇರಿಕೊಂಡಿದೆ. ಇದು ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಭಾರತದಲ್ಲಿ, ಲಾ ನಿನಾ ಬಲವಾದ ಮಾನ್ಸೂನ್ ಮತ್ತು ಸರಾಸರಿಗಿಂತ ಹೆಚ್ಚಿನ ಮಳೆ ಮತ್ತು ತಂಪಾದ ಚಳಿಗಾಲಕ್ಕೆ ಸಂಬಂಧಪಟ್ಟಿದೆ.

ಜುಲೈ ತಿಂಗಳ ಮೊದಲಾರ್ಧ ದೇಶದ ಹಲವೆಡೆ ಭಾರಿ ಮಳೆ
ಜುಲೈ ತಿಂಗಳ ಮೊದಲಾರ್ಧದಲ್ಲಿ, ಗರಿಷ್ಠ ಮಾನ್ಸೂನ್ ತಿಂಗಳು, ಮಧ್ಯ ಮತ್ತು ಪಶ್ಚಿಮ ಭಾರತದ ಮೇಲೆ ಭಾರಿ ಮಳೆಯಾಯಿತು. ಹಲವು ಭಾಗಗಳು ಪ್ರವಾಹದಿಂದ ತತ್ತರಿಸಿದವು. ಆದರೆ ಗಂಗಾನದಿಯ ಬಯಲು ಮತ್ತು ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶನಿವಾರದಿಂದ ವಾಯುವ್ಯ ಭಾರತ, ಕರಾವಳಿ ಪ್ರದೇಶ ಮತ್ತು ಹಿಮಾಲಯದ ತಪ್ಪಲಿನಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications