ತೆಲಂಗಾಣ ವಿಧಾನಸಭೆ ಚುನಾವಣೆ : ಅಂಕಿ-ಅಂಶಗಳು
ಹೈದರಾಬಾದ್, ಅಕ್ಟೋಬರ್ 09 : ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 2014ರಲ್ಲಿ ಹೊಸದಾಗಿ ರಾಜ್ಯ ಸ್ಥಾಪನೆಯಾದ ಬಳಿಕ 2ನೇ ವಿಧಾನಸಭೆ ಚುನಾವಣೆ ನಡೆಯುತ್ತಿದೆ.
ಚುನಾವಣಾ ಆಯೋಗ ತೆಲಂಗಾಣ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದೆ. 120 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.
ಹೊಸದಾಗಿ ರಚನೆಯಾದ ತೆಲಂಗಾಣದಲ್ಲಿ 2014ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಕೆ.ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು. ಅವಧಿಗೂ ಮೊದಲೇ ಅವರು ವಿಧಾನಸಭೆ ವಿಸರ್ಜನೆ ಮಾಡಿದ್ದು, ಈಗ ಚುನಾವಣೆ ಎದುರಾಗಿದೆ.

2014ರ ಚುನಾವಣೆಯಲ್ಲಿ ಟಿಆರ್‌ಎಸ್ 63 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15 ಸ್ಥಾನಗಳಲ್ಲಿ ಜಯಗಳಿಸಿದ್ದವು. ಎಐಎಂಐಎಂ 7, ಬಿಜೆಪಿ 5, ವೈಎಸ್‌ಆರ್‌ಸಿಪಿ 3, ಬಿಎಸ್‌ಪಿ 2 ಸ್ಥಾನ ಪಡೆದಿದ್ದವು.
ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಯಾವುದೇ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. 120 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಶೇ 10ರಷ್ಟು ಮುಸ್ಲಿಂ ಮತಗಳಿವೆ. ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂಬ ನಿರೀಕ್ಷೆ ಇದೆ.












Click it and Unblock the Notifications