ಆರ್ಯ ವೈಶ್ಯರನ್ನು ಸ್ಮಗ್ಲರ್ ಗಳೆಂದ ದಲಿತ ಬರಹಗಾರನಿಗೆ ಗೃಹಬಂಧನ
ಹೈದರಾಬಾದ್, ಅಕ್ಟೋಬರ್ 28 : ಪ್ರಖರ ದಲಿತ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಕಾಂಚ ಇಲಯ್ಯ ಅವರನ್ನು ಶನಿವಾರ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಳ್ಳದಂತೆ ಅವರಿಗೆ ದಿಗ್ಬಂಧನ ವಿಧಿಸಲಾಗಿದೆ.
ಮನೆಯಿಂದ ಹೊರಬಿದ್ದರೆ ನಿಮ್ಮನ್ನು ಬಂಧಿಸಲಾಗುವುದು ಎಂದು ಆಂಧ್ರ ಪ್ರದೇಶದ ಪೊಲೀಸರು ಕಾಂಚ ಅವರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದು, ತಾರ್ನಕದಲ್ಲಿರುವ ಅವರ ನಿವಾಸದೆದಿರು ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅವರ ಅಭಿಮಾನಿಗಳು ಮನೆಯೆದಿರು ಜಮಾಯಿಸಿದ್ದು, ಕಾಂಚ ಇಲಯ್ಯ ಅವರು ವಿಜಯವಾಡಾಗೆ ತೆರಳದಂತೆ ಅದ್ಹೇಗೆ ಪೊಲೀಸರು ಯಶಸ್ವಿಯಾಗುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿವೆ ಎಂದು ಇಲಯ್ಯ ಅವರು ಆರೋಪಿಸಿದ್ದಾರೆ.
ಕಾಂಚ ಇಲಯ್ಯ ಅವರು ಆರ್ಯ ಸಮಾಜದವರನ್ನು ಸಾಮಾಜಿಕ ದರೋಡೆಕೋರರು ಎಂದು 'ಸಾಮಾಜಿಕ ಸ್ಮಗ್ಲರೇಲು ಕೊಮಟೊಲ್ಲು' ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದು, ಅದು ವಿಜಯವಾಡಾದಲ್ಲಿ ಬಿಡುಗಡೆಯಾಗುತ್ತಲಿದೆ. ಈ ಪುಸ್ತಕವನ್ನು ನಿಷೇಧಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
ವಿಜಯವಾಡಾದಲ್ಲಿ ನಡೆಯಲಿರುವ ಸಾರ್ವಜನಿಕರ ಸಭೆಗೆ ಪೂರ್ವಾನುಮತಿ ಇಲ್ಲದಿರುವುದರಿಂದ ನಿಷೇಧಾಜ್ಞೆ ಹೇರಿರುವುದಾಗಿ ಶುಕ್ರವಾರವೇ ಕಾಂಚ ಇಲಯ್ಯ ಅವರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು.
ವಿಜಯವಾಡಾದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಬಾರದೆಂದು ಆಂಧ್ರ ಪ್ರದೇಶ ಸರಕಾರಕ್ಕೆ ಆದೇಶ ನೀಡಬೇಕೆಂದು ಆರ್ಯ ವೈಶ್ಯ ಸಂಗಂ ಹೂಡಿದ್ದ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ಮಾನ್ಯ ಮಾಡಿಲ್ಲ.
ಕಾಂಚ ಇಲಯ್ಯ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರೆ ವ್ಯತಿರಿಕ್ತ ಫಲಿತಾಂಶ ಎದುರಿಸಬೇಕಾಗುತ್ತದೆ ಎಂದು ಆರ್ಯ ವೈಶ್ಯ ಬ್ರಾಹ್ಮಣ ಐಕ್ಯ ವೇದಿಕೆ ಇಲಯ್ಯ ಅವರಿಗೆ ಎಚ್ಚರಿಕೆಯನ್ನೂ ನೀಡಿತ್ತು.












Click it and Unblock the Notifications