ಕತ್ತೆ ಕದ್ದ ಆರೋಪದಲ್ಲಿ ಕಾಂಗ್ರೆಸ್ ಮುಖಂಡನ ಬಂಧನ!
ಹೈದ್ರಾಬಾದ್, ಫೆಬ್ರವರಿ 18: ತೆಲಂಗಾಣದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ವೆಂಕಟ್ ಬಲ್ಮೂರ್ ಅವರನ್ನು ಕತ್ತೆ ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ.
ಕಳೆದ ಫೆಬ್ರವರಿ 17ರಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಜನ್ಮದಿನವನ್ನು ಕಾಂಗ್ರೆಸ್ ವಿಭಿನ್ನವಾಗಿ ಆಚರಿಸಿತು. ಕತ್ತೆ ಎದುರು ಕೇಕ್ ಕತ್ತರಿಸುವ ಮೂಲಕ ಕೆಸಿಆರ್ ಹುಟ್ಟುಹಬ್ಬದ ಬಗ್ಗೆ ಲೇವಡಿ ಮಾಡುವುದಕ್ಕೆ ಕಾಂಗ್ರೆಸ್ ಯೋಜನೆ ಹಾಕಿಕೊಂಡಿತ್ತು.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ವೆಂಕಟೇಶ್ ಬಲ್ಮೂರ್, ಶಾತವಾಹನ ವಿಶ್ವವಿದ್ಯಾಲಯದ ಬಳಿ ಕತ್ತೆಯ ಮುಖಕ್ಕೆ ಕೆಸಿಆರ್ ಭಾವಚಿತ್ರವನ್ನು ಹಾಕಿ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ಸಂಬಂಧ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಗುರುವಾರ ರಾತ್ರಿ ಹುಜೂರಾಬಾದ್ ಪಟ್ಟಣದಲ್ಲಿ ವೆಂಕಟೇಶ್ ಬಲ್ಮೂರ್ ಅವರನ್ನು ಬಂಧಿಸಿದ್ದರು.

ವೆಂಕಟೇಶ್ ಬಲ್ಮೂರ್ ಟ್ವೀಟ್:
"ರೈತರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರ ಜೀವನವನ್ನು ಹಾಳು ಮಾಡಿದ್ದಕ್ಕಾಗಿ. ಸುಳ್ಳು ಭರವಸೆಗಳಿಗಾಗಿ, ಹುಸಿ ಪ್ರಚಾರಕ್ಕಾಗಿ," ಕೆ ಚಂದ್ರಶೇಖರ್ ರಾವ್ ಜನ್ಮದಿನದಂದು ಕತ್ತೆಯ ಚಿತ್ರಗಳೊಂದಿಗೆ ಬಲ್ಮೂರ್ ಟ್ವೀಟ್ ಮಾಡಿದ್ದರು. ಒಟ್ಟು ಆರು ಕಾಂಗ್ರೆಸ್ ನಾಯಕರ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಲ್ಮೂರ್ ಇತ್ತೀಚೆಗೆ ಹುಜೂರಾಬಾದ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.












Click it and Unblock the Notifications