ತೆಲಂಗಾಣದಲ್ಲಿ ಸೋನಿಯಾ ಮ್ಯಾಜಿಕ್, ಕಾಂಗ್ರೆಸ್ ಪುಟಿದೇಳೋಕೆ ಅದೊಂದೇ ಟಾನಿಕ್!
Recommended Video

ನವದೆಹಲಿ, ನವೆಂಬರ್ 21: ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಡೆಸಲಿರುವ ರ‍್ಯಾಲಿ ರಾಜ್ಯ ರಾಜಕಾರಣದಲ್ಲಿ ಹೊಸ ತಲ್ಲಣ ಸೃಷ್ಟಿಸಲಿದೆ ಎಂದು ಕಾಂಗ್ರೆಸ್ ನಂಬಿದೆ.
ತೆಲಂಗಾಣದಲ್ಲಿ ನವೆಂಬರ್ 23ರಂದು ಸೋನಿಯಾ ಗಾಂಧಿ ಅವರು ರ‍್ಯಾಲಿಯೊಂದನ್ನು ನಡೆಸಲಿದ್ದು, ಈ ರ‍್ಯಾಲಿ ತೆಲಂಗಾಣ ಚುನಾವಣೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.
ಈ ರ‍್ಯಾಲಿಯಲ್ಲಿ ಸೋನಿಯಾ ಗಾಂಧಿ ಅವರು ಭಾವನಾತ್ಮಕ ಭಾಷಣ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರ ಒಂದೇ ಒಂದು ರ‍್ಯಾಲಿಯೂ ರಾಜ್ಯ ರಾಜಕಾರಣಕ್ಕೆ ಅತ್ಯಂತ ಅಗತ್ಯವಾಗಿದ್ದು, ಕಾಂಗ್ರೆಸ್ ಅದನ್ನು ಉತ್ಸುಕತೆಯಿಂದ ಎದುರು ನೋಡುತ್ತಿದೆ ಎಂದು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್ ಸಿ ಖುಂಟಿಯಾ ಹೇಳಿದ್ದಾರೆ.

ತೆಲುಗು ದೇಶಂ ನಾಯಕರೂ ಭಾಗಿ?
ಕಾಂಗ್ರೆಸ್ ಜೊತೆ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಂಡಿರುವ ತೆಲುಗುದೇಶಂ ಪಕ್ಷದ ನಾಯಕರೂ ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರಾ ಎಂಬ ಪ್ರಶ್ನೆಗೆ ಖುಂಟಿಯಾ ಅವರು ಪ್ರತಿಕ್ರಿಯೆ ನೀಡಿಲ್ಲ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಈ ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಸೋನಿಯಾ ಗಾಂಧಿಗೆ ಸಾಕಷ್ಟು ಅಭಿಮಾನಿಗಳು
ತೆಲಂಗಾಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಗ್ಗೆ ಸಾಕಷ್ಟು ಗೌರವವಿದೆ. ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ಅದೂ ಅಲ್ಲದೆ, ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರ್ಯಾರೂ ಪ್ರಭಾವಶಾಲಿಗಳಲ್ಲದ ಕಾರಣ ಸೋನಿಯಾ ಗಾಂಧಿ ಅವರ ರ‍್ಯಾಲಿಯ ಮೇಲೆಯೇ ಇಲ್ಲಿನ ಕಾಂಗ್ರೆಸ್ ಭರವಸೆ ಇಟ್ಟುಕೊಂಡಿದೆ.

'ಚಂದ್ರಶೇಖರ್ ರಾವ್ ಗೆ ಸೋಲು'
"ಅವಧಿಗೂ ಮುನ್ನವೇ ಚುನಾವಣೆ ನಡೆಸುವುದಕ್ಕೆ ಕಾರಣರಾದ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ ಕೆ.ಚಂದ್ರಶೇಖರ್ ರಾವ್ ಅವರು ಸೋಲಲಿದ್ದಾರೆ. ಅವಧಿಗೂ ಮುನ್ನವೇ ಚುನಾವಣೆ ನಡೆಯುವಂತೆ ಮಾಡಿದ್ದೇ ಅವರಿಗೆ ಮುಳುವಾಗಲಿದೆ. ಕಾಂಗ್ರೆಸ್ ಈ ರಾಜ್ಯದಲ್ಲಿ ಟಿಡಿಪಿ, ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಗೆಲುವು ಸುಲಭವಾಗಲಿದೆ" ಎಂದು ಆರ್ ಸಿ ಖುಂಟಿಯಾ ಹೇಳಿದ್ದಾರೆ.

ಚುನಾವಣೆ ಯಾವಾಗ?
119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಕೆ ಚಂದ್ರಶೇಖರ ರಾವ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ.












Click it and Unblock the Notifications