ವೋಟಿಗಾಗಿ ನೋಟು: ಶಾಸಕ ರೇವಂತ್ ಗೆ ಸಿಕ್ತು ಜಾಮೀನು
ಹೈದರಾಬಾದ್, ಜೂ.30: ತೆಲುಗುದೇಶಂ ಪಕ್ಷದ ಪರ ಮತ ಹಾಕುವಂತೆ ಆಂಗ್ಲೋ ಇಂಡಿಯನ್ ನಾಮ ನಿರ್ದೇಶಿತ ವಿಧಾನ ಪರಿಷತ್ ಸದಸ್ಯರಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತೆಲಂಗಾಣ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಅವರಿಗೆ ಮಂಗಳವಾರ ಜಾಮೀನು ಸಿಕ್ಕಿದೆ. ಇಲ್ಲಿನ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್ ಸದಸ್ಯ ಸ್ಟೀಫನ್ ಸನ್ ಅವರಿಗೆ ಜೂ.1 ರಂದು ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದ ಪರ ಮತ ಹಾಕುವಂತೆ ಲಂಚದ ಆಮಿಷ ಒಡ್ಡಿದ ಆರೋಪ ರೇವಂತ್ ಅವರ ಮೇಲಿದೆ. ["ತಾಕತ್ತಿದ್ರೆ ನಾಯ್ಡು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ"]
ಸಿಕಂದರಾಬಾದಿನ ಲಾಲಾಗುಡದ ಮನೆಯಲ್ಲಿ ಡೀಲ್ ನಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶಾಸಕ ರೇವಂತ್ ರೆಡ್ಡಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು.

ಟಿಡಿಪಿ ಅಭ್ಯರ್ಥಿ ಪರ ಮತ ಹಾಕಿದರೆ 5 ಕೋಟಿ ರು ನೀಡುತ್ತೇನೆ. ಸದ್ಯಕ್ಕೆ 50 ಲಕ್ಷ ರು ಅಡ್ವಾನ್ಸ್ ಇಟ್ಟುಕೊಳ್ಳಿ ಎಂದು ಸ್ಟೀಫನ್ಸನ್ ಗೆ ರೇವಂತ್ ರೆಡ್ಡಿ ಲಂಚ ನೀಡುವಾಗ ಸಿಕ್ಕಿಬಿದ್ದರು.ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆ, ಐಪಿಸಿ ಸೆಕ್ಷನ್ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ರೇವಂತ್ ರೆಡ್ಡಿ ಬಂಧನದ ನಂತರ ಆಂಧ್ರಪ್ರದೇಶ ಹಾಗೂ ತೆಲಂಗಾಣ ನಡುವೆ ವಾಕ್ಸಮರ, ಕೋರ್ಟ್ ಕೇಸುಗಳು ಶುರುವಾಗಿಬಿಟ್ಟಿತು. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹಾಗೂ ಆಂಧ್ರಸಿಎಂ ಚಂದ್ರಬಾಬು ನಾಯ್ಡು ಇಬ್ಬರು ಪ್ರತಿಷ್ಠೆಯ ಕದನವನ್ನಾಗಿಸಿಕೊಂಡಿದ್ದರು. ಈ ವಿಷಯ ಕೇಂದ್ರ ಸರ್ಕಾರದ ತನಕ ಮುಟ್ಟಿತ್ತು.
ರೆಡ್ಡಿ ಮುಂದಿನ ನಡೆ?: ರೇವಂತ್ ರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಯನ್ನು ಎದುರಿಸುತ್ತಾರೆ ಎಂಬ ಸುದ್ದಿಯಿದೆ. ಜೊತೆಗೆ ಅಸೆಂಬ್ಲಿಯಿಂದ ರೇವಂತ್ ರೆಡ್ಡಿ ಉಚ್ಚಾಟನೆಗೊಳ್ಳುವ ಸಾಧ್ಯತೆಯೂ ಇದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications