ಆಂಧ್ರ ಸಿಎಂ ಕಿರಣ್ ರೆಡ್ಡಿ ರಾಜೀನಾಮೆ, ಕಾಂಗ್ರೆಸ್ ಗೆ ಗುಡ್ ಬೈ
ಹೈದರಾಬಾದ್, ಫೆ.19: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಿಂದ ರಾಜ್ಯ ವಿಭಜನೆಯಷ್ಟೇ ಅಲ್ಲ ಜನರ ಐಕ್ಯತೆಯನ್ನು ಒಡೆದು ಹೋಗಿದೆ. ಕೇಂದ್ರದ ಒಡೆದು ಆಳುವ ನೀತಿಯನ್ನು ಖಂಡಿಸುತ್ತೇನೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ರಾಜೀನಾಮೆ ನೀಡಿದ್ದಾರೆ. ಇದರ ಜತೆಗೆ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಕಿರಣ್ ಅವರು ರಾಜೀನಾಮೆ ನೀಡಿದ್ದಾರೆ. ಇದು ನನ್ನ ತೆಲುಗು ಜನರ ಐಕ್ಯತೆಗಾಗಿ ತೆಗೆದುಕೊಂಡ ನಿರ್ಣಯ ಎಂದಿದ್ದಾರೆ.
ತೆಲಂಗಾಣ ಮಸೂದೆಯನ್ನು ಕಳ್ಳತನದಿಂದ ಮಂಡಿಸಿ ಅಂಗೀಕಾರ ಪಡೆಯಲಾಗಿದೆ ಎಂದಿರುವ ಕಿರಣ್ ಕುಮಾರ್ ರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು, ಶೀಘ್ರವೇ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಕಿರಣ್ ಅವರ ಬೆಂಬಲಿತ 50 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಸರಣಿ ಮುಂದುವರೆಸುವ ಸಾಧ್ಯತೆ ಕಂಡು ಬಂದಿದೆ.[ಒಡೆದ ಮನೆ ಆಂಧ್ರದಲ್ಲಿ ನೋವು-ನಲಿವು]
ರಾಯಲಸೀಮಾ ಪ್ರಾಂತ್ಯದ ಚಿತ್ತೂರು ಜಿಲ್ಲೆಯಿಂದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದ ಕಿರಣ್ ಕುಮಾರ್ ರೆಡ್ಡಿ(53) ಅವರು ಹೈದರಾಬಾದಿನ ನಿಜಾಂ ಕಾಲೇಜಿನಲ್ಲಿ ಪದವಿ ಪೂರೈಸಿ ನಂತರ ಕಾನೂನು ಪದವಿ ಪಡೆದವರಾಗಿದ್ದಾರೆ. ಶಾಲಾ, ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಕೆಟರ್ ಆಗಿದ್ದ ಕಿರಣ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಅಜರುದ್ದೀನ್ ಅವರ ಜತೆ ರಣಜಿ ತಂಡವನ್ನು ಪ್ರತಿನಿಧಿಸಿದ್ದರು.

ಒಂದು ಕಾಲದಲ್ಲಿ ದಿವಂಗತ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಆಪ್ತ ಅನುಯಾಯಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಸಚೇತಕ, ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಕಿರಣ್ ಅವರ ತಂದೆ ದಿವಂಗತ ಅಮರನಾಥರೆಡ್ಡಿ ಅವರು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ರಾಜಕೀಯ ಗುರುವಾಗಬೇಕು. ಆದರೆ, ರಾಜಕೀಯವಾಗಿ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಹಾಗೂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.[ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ]
ಮುಂದುವರೆದ ಬಂದ್: ಇತ್ತ ತೆಲಂಗಾಣ ರಾಜ್ಯ ರಚನೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರ ವಿರುದ್ಧ ಸೀಮಾಂಧ್ರದ ಆಯಾ ಪಕ್ಷಗಳ ಸ್ಥಳೀಯ ಜನಪ್ರತಿನಿಧಿಗಳು ಸಿಡಿದೆದ್ದಿದ್ದಾರೆ. ಸೀಮಾಂಧ್ರದ ನಾಯಕರು ಬಹಿರಂಗವಾಗಿಯೇ ವರಿಷ್ಠರನ್ನ ದೂಷಿಸುತ್ತಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಇಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈಚೆಗೆ ಲೋಕಸಭೆಯಲ್ಲಿ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದ ಲಗಡಪಾಟಿ ರಾಜಗೋಪಾಲ್, ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿನ್ನೆಯೇ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
ಸಮೈಕ್ಯಾಂಧ್ರ ಹೋರಾಟ ಸಮಿತಿ ಕರೆ ನೀಡಿರುವ ಬಂದ್'ಗೆ ಪಕ್ಷಾತೀತವಾಗಿ ರಾಜಕಾರಣಿಗಳು, ವಾಣಿಜ್ಯೋದ್ಯಮಿ ಸಂಘಗಳು, ವಿವಿಧ ನೌಕರರ ಸಂಘಗಳು, ವಿದ್ಯಾರ್ಥಿ ಮತ್ತಿತರೆ ಪ್ರತಿಗಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಆಂಧ್ರ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಂಧ್ರಕ್ಕೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.












Click it and Unblock the Notifications