ಇಡೀ ಮರಾಠ ಜನಾಂಗವನ್ನು ದೂಷಿಸುವುದು ತಪ್ಪು : ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್!
ಹುಬ್ಬಳ್ಳಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇದೀಗ ಈ ಸಂಬಂಧ ಮಾತನಾಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಯಾರೋ ನಾಲ್ಕು ವ್ಯಕ್ತಿಗಳು ಮಾಡುವುದಕ್ಕೆ ಇಡೀ ಮರಾಠ ಜನಾಂಗವನ್ನು ಟೀಕೆ ಮಾಡೋದು ಸರಿಯಲ್ಲ ಎಂದಿದ್ದಾರೆ. ಕರ್ನಾಟಕ ಬಂದ್‌ನ ನಂತರ ಜಗದೀಶ್ ಶೆಟ್ಟರ್ ಅವರು ಕೊಟ್ಟಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಯಾರೋ ನಾಲ್ಕು ಜನ ಮಾಡಿರುವ ಕೆಲಸಕ್ಕೆ ಇಡೀ ಮರಾಠ ಜನಾಂಗವನ್ನು ದೂಷಿಸುವುದು ತಪ್ಪು ಅಂತ ಹೇಳಿದ್ದಾರೆ. ಮಹಾಜನ್ ವರದಿಗೆ ಕರ್ನಾಟಕ ಬದ್ಧವಾಗಿದೆ.

ಪದೇ ಪದೇ ಗಡಿ ತಂಟೆಯಿಂದ ರಾಜ್ಯದಲ್ಲಿ ಶಾಂತಿ ಹಾಳಾಗಿದೆ. ಮರಾಠರು ಕನ್ನಡಿಗರು ಎನ್ನುವ ಸಂಘರ್ಷ ಬೇಡ ಅಂತ ಹೇಳಿದ್ದಾರೆ.
ಬೆಳಗಾವಿಯಲ್ಲಿ ಘರ್ಷಣೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ನಾವೆಲ್ಲರೂ ಭಾರತೀಯರು ಪಾಕಿಸ್ತಾನದಲ್ಲಿವರಲ್ಲಾ. ಯಾರೋ ನಾಲ್ಕು ಜನ ಮಾಡುವುದಕ್ಕೆ ಇಡೀ ಮರಾಠ ಜನಾಂಗವನ್ನು ಟೀಕೆ ಮಾಡುವುದು ಸರಿಯಲ್ಲ. ಮರಾಠಿ ಹಾಗೂ ಕನ್ನಡಿಗರು ಒಂದೇ ಕುಟುಂಬದ ಅಣ್ಣ - ತಮ್ಮಂದಿರು ಇದ್ದಂತೆ ಎಂದು ಹೇಳಿದ್ದಾರೆ.
ಇನ್ನು ಮುಂದುವರಿದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರದೋ ಮಾತು ಕೇಳಿ ಸ್ಪೀಕರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರು ಆರೋಪ ಮಾಡಿದ್ದಾರೆ. ಸದನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಆಶಿಸ್ತು ಪ್ರದರ್ಶಿಸಿದಾಗ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಈ ರೀತಿ ಅಮಾನತು ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಸರ್ಕಾರ ಭಂಡತನ ತೋರಿದಾಗ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಸ್ಪೀಕರ್ ತಮ್ಮ ಕಚೇರಿಗೆ ಕರೆಯಿಸಿ ಬುದ್ಧಿ ಹೇಳಿ, ಎಚ್ಚರಿಕೆ ಕೊಡಬಹುದಿತ್ತು. ಆರು ತಿಂಗಳ ಕಾಲ ಅಮಾನತು ಮಾಡಿರುವುದು ಅತ್ಯಂತ ಖಂಡನೀಯ. ಈ ರೀತಿಯ ಘಟನೆ ಹಿಂದೆ ನಡೆದಿರಲಿಲ್ಲ. ಸಿದ್ದರಾಮಯ್ಯ ಸದನದ ಬಾಗಿಲನ್ನೇ ಒದ್ದಿದ್ದರು. ದೊಡ್ಡ ರೀತಿಯ ಗೂಂಡಾಗಿರಿ ಮಾಡಿದ್ದರು. ಆಗ ಅವರನ್ನು ಅಮಾನತು ಮಾಡಲಾಗಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
ಸರಳ ಪ್ರತಿಭಟನೆ ಮಾಡಿದ್ದಾರೆ. ಪೇಪರ್ ಹರಿದು ಹಾಕೋದು ಈಗ ಕಾಮನ್ ಆಗಿಬಿಟ್ಟಿದೆ. ಸ್ಪೀಕರ್ ಪೀಠಕ್ಕೆ ಹೋಗಿದ್ದರೆ, ದೈಹಿಕವಾಗಿ ಹಲ್ಲೆ ಮಾಡಿಲ್ಲ. ಯಾರದೋ ಮಾತು ಕೇಳಿ ಆರು ತಿಂಗಳು ಅಮಾನತು ಮಾಡಲಾಗಿದೆ. ವಿಧಾನಸಭೆ ಇತಿಹಾಸದಲ್ಲೇ ಈ ರೀತಿ ನಡೆದಿಲ್ಲ. ಸ್ವಯಂ ಪ್ರೇರಣೆಯಿಂದ ಅಮಾನತು ರದ್ದು ಮಾಡಬೇಕು. ಸ್ಪೀಕರ್ ಯು.ಟಿ ಖಾದರ್ ಅವರ ನಡವಳಿಕೆ ಸರಿಯಲ್ಲ. ಒಂದು ದಿನದ ಮಟ್ಟಿಗೆ ಅಮಾನತು ಮಾಡಬಹುದಿತ್ತು. ಯಾವುದೇ ಮೀಟಿಂಗ್‌ಗೆ ಸಹ ಹಾಜರಾಗಬಾರದು ಎಂದಾದರೆ ಹೇಗೆ ಎಂದು ಅವರು ಹೇಳಿದ್ದಾರೆ.
ಇದು ಶಾಸಕರ ಹಕ್ಕುಗಳನ್ನು ಕಿತ್ತುಕೊಂಡಂತೆ. ಸ್ಪೀಕರ್ ಅವರು ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚೋದನೆಯಿಂದಲೇ ಇದೆಲ್ಲ ನಡೆದಿದೆ. ಹೀಗಾಗಿ, ಸಿದ್ದರಾಮಯ್ಯ ಅವರೇ ಇದನ್ನು ಹಿಂದೆ ಪಡೆಯುವಂತೆ ನೋಡಿಕೊಳ್ಳಬೇಕು. ಇನ್ನು ಇದು ಪೂರ್ವನಿಯೋಜಿತ ಅನ್ನೋದು ಗೊತ್ತಿಲ್ಲ. ಸ್ಪೀಕರ್ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದರು.
ರಾಜ್ಯದಲ್ಲಿ ಹನಿ ಟ್ರ್ಯಾಪ್ ಗಂಭೀರ ಪ್ರಕರಣವಾಗಿದೆ. ಜನಪ್ರತಿನಿಧಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಒಬ್ಬ ಮಂತ್ರಿಯೇ ಹನಿ ಟ್ರ್ಯಾಪ್ ವಿಷಯವನ್ನು ಒಪ್ಪಿಕೊಂಡಿದ್ದಾರೆ. 48 ಜನರ ಸಿಡಿ ಇವೆ ಎನ್ನುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರು ನೂರಾರು ಜನರ ಸಿಡಿ ಇವೆ ಅಂತ ಹೇಳಿದ್ದಾರೆ.
ಬ್ಲಾಕ್ ಮೇಲ್ ಮಾಡೋ ತಂಡಗಳೇ ಇವೆ. ಇದರ ಹಿಂದಿನ ತಂತ್ರ, ಕುತಂತ್ರ ಹೊರ ಬರಬೇಕಿದೆ. ಹೀಗಾಗಿ, ಪ್ರಕರಣ ಸಮಗ್ರ ತನಿಖೆ ನಡೆಯಬೇಕಿದೆ.
ಸಿಬಿಐ ಕೊಟ್ಟರೆ ಮಾತ್ರ ಸೂಕ್ತ ತನಿಖೆಯಾಗುತ್ತೆ . ಇದಕ್ಕೊಂದು ಇತಿಶ್ರೀ ಹಾಡಬೇಕಿದೆ. ಹೀಗಾಗಿ, ಇದರ ಹಿಂದಿರೋ ನಿರ್ದೇಶಕರು, ನಿರ್ಮಾಪಕರು ಯಾರೆನ್ನೋದು ಬಹಿರಂಗವಾಗಬೇಕು. ಅವರಿಗೆ ಕಠಿಣ ಶಿಕ್ಷೆ ಆಗಬೇಕು ಈ ರೀತಿ ಆದರೆ ಮಾತ್ರ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬ್ರೇಕ್ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮರಾಠಿ ಪರ ಮಾತು ಆಕ್ರೋಶ: ಬೆಳಗಾವಿಯಲ್ಲಿ ಮರಾಠಿ ಹಾಗೂ ಮಹಾರಾಷ್ಟ್ರದ ಪರವಾಗಿ ಕರ್ನಾಟಕದ ಕೆಲವು ರಾಜಕಾರಣಿಗಳು ಅದರಲ್ಲೂ ಮುಖ್ಯವಾಗಿ ಬೆಳಗಾವಿಯ ಕೆಲವು ರಾಜಕಾರಣಿಗಳು ಮಾತನಾಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರ ಹಾಗೂ ಮರಾಠಿಗರ ಪರವಾಗಿ ಕೆಲವು ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ಮತ ಬ್ಯಾಂಕ್‌ಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಾಡು - ನುಡಿಯ ವಿಚಾರದಲ್ಲಿ ರಾಜಕಾರಣಿಗಳು ರಾಜಿಯಾಗಬಾರದು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ.
ಬೆಳಗಾವಿಯ ಹಲವು ನಾಯಕರು ಬ್ಯಾಲೆನ್ಸಡ್ ಹೇಳಿಕೆಗಳನ್ನು ಕೊಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡುವುದರಿಂದ ಬೆಳಗಾವಿ ಗಡಿ ವಿವಾದ ಇತ್ಯರ್ಥವಾಗಲ್ಲ ಎನ್ನುವುದು ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಂಸದ ಜಗದೀಶ್ ಶೆಟ್ಟರ್ ಅವರು ಸಹ ಓಲೈಕೆಯ ಮಾತುಗಳನ್ನಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಮರಾಠಿ ಪ್ರೇಮಕ್ಕೆ ಕನ್ನಡಿಗರ ಆಕ್ರೋಶ
ಇನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬೆಳಗಾವಿ ಗಡಿ ವಿವಾದ ಈಚೆಗೆ ಹೆಚ್ಚಾದ ಮೇಲೆ ಹೆಚ್ಚು ಚರ್ಚೆಯಾಗಿದ್ದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮರಾಠಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು. ಬ್ಯಾನರ್‌ಗಳು ಸಂಪೂರ್ಣವಾಗಿ ಮರಾಠಿ ಮಯವಾಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲಿ ಕನ್ನಡದ ಕಂಡಕ್ಟರ್ ಮೇಲೆ ಹಲ್ಲೆಯಾದ ಮೇಲೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆ ನೀಡದೆ ಇದ್ದದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾದ ಮೇಲೆ ಅವರು ಹೇಳಿಕೆ ಕೊಟ್ಟಿದ್ದರು. ಇನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅವರು ಮರಾಠಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ.












Click it and Unblock the Notifications