Aero India 2023: ಏರ್ ಶೋನಿಂದ ಬಡತನ ನಿವಾರಣೆ ಆಗುತ್ತಾ?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ
ಏರ್ ಶೋ ಬಡತನ ನಿವಾರಣೆ ಕಾರ್ಯಕ್ರಮನಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದು ಏಕೆ ಅನ್ನುವ ವಿವರ ಇಲ್ಲಿದೆ ನೋಡಿ.
ಹುಬ್ಬಳ್ಳಿ, ಫೆಬ್ರವರಿ, 13: ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದಲ್ಲಿ ಸೋಮವಾರದಿಂದ (ಫೆಬ್ರವರಿ 13) ಏರ್ ಇಂಡಿಯಾ ಶೋ ಆರಂಭವಾಗಿದೆ. ಇದು ಬಡತನ ನಿವಾರಿಸುವ ಕಾರ್ಯಕ್ರಮವಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ನಂತರ ಇದಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಏರ್ ಇಂಡಿಯಾ ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಏರ್ ಶೋನಿಂದ ಬಡತನ ನಿವಾರಣೆ ಆಗುತ್ತಾ?
ಹುಬ್ಬಳ್ಳಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಏರ್ ಶೋನಿಂದ ಬಡತನ ನಿವಾರಣೆ ಆಗುತ್ತಾ? ವ್ಯಂಗ್ಯವಾಡಿದರು. ಚುನಾವಣೆಯ ನೆಪದಲ್ಲಿ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ. ಇದು 14ನೇ ಆವೃತಿಯ ಏರ್ ಶೋ ಆಗಿದೆ. ಇದನ್ನು ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದಾರಾ? ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ
ಇನ್ನು ಉತ್ತರ ಕರ್ನಾಟಕ ಭಾಗಕ್ಕೆ ಯಾವ ಪಕ್ಷದಿಂದ ಅನ್ಯಾಯವಾಗಿದೆ. ಮಹದಾಯಿ ನೀರಿನ ವಿಚಾರವಾಗಿ ಕಾನೂನಾತ್ಮಕ ಮತ್ತು ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ. ಆದರೆ ಬಿಜೆಪಿಯವರು ಪ್ರಚಾರವಾದರೆ ಸಾಕು ಎಂದು ಹೇಳಿದ್ದರು. ಈಗಲೂ ಬಿಜೆಪಿ ಅದನ್ನೇ ಮಾಡುತ್ತಿದೆ ಎಂದು ಹರಿಹಾಯ್ದರು. ಇನ್ನು ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅಂತಾ ಹೇಳುತ್ತಾರೆ. ಯೋಜನೆಗಳ ಹೆಸರಿನಲ್ಲಿ ಹಣ ಹೊಡೆಯುವ ಕೆಲಸ ಮಾಡಿದರು. ಬಡವರ ಜೀವನದಲ್ಲಿ ರಾಷ್ಟ್ರೀಯ ಪಕ್ಷಗಳು ಚೆಲ್ಲಾಟವಾಡುತ್ತಿವೆ. ನೀರಾವರಿ ಯೋಜನೆ ಹೆಸರಿನಲ್ಲಿ ಈ ಭಾಗದ ನಾಯಕರೇ ಹಣ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ವಿರುದ್ಧ HDK ಆಕ್ರೋಶ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರೇ ಕಾರಣರಾಗಿದ್ದಾರೆ. ಮೈತ್ರಿ ಸರ್ಕಾರ ಬಂದ 2 ತಿಂಗಳಲ್ಲೇ ಸರ್ಕಾರ ಪತನದ ಬಗ್ಗೆ ಹೇಳಿದ್ದರು. ಬಿಜೆಪಿಯ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲೇ ಮಾತನಾಡಿ. ಸಿದ್ದರಾಮಯ್ಯ ಕುರ್ಚಿಗಾಗಿ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡುವುದಕ್ಕೆ ಸಿದ್ದರಿದ್ದರು. ಇನ್ನೂ 10 ವರ್ಷವಾದರೂ ಇವರಿಗೆ ಬಿಜೆಪಿಯನ್ನು ತೆಗೆಯಲು ಆಗಲ್ಲ. ಜೆಡಿಎಸ್ನಿಂದ ಮಾತ್ರ ಬಿಜೆಪಿಯನ್ನು ತೆಗೆಯುವುದಕ್ಕೆ ಸಾಧ್ಯ ಎಂದು ಭವಿಷ್ಯ ನುಡಿದರು.












Click it and Unblock the Notifications