ಹುಬ್ಬಳ್ಳಿ; ಟೋಲ್ ವಿನಾಯಿತಿಗೆ ಕೇಂದ್ರ ಸಚಿವರಿಗೆ ಪತ್ರ
ಹುಬ್ಬಳ್ಳಿ, ಏಪ್ರಿಲ್ 05; ಹುಬ್ಬಳ್ಳಿ ತಾಲ್ಲೂಕಿನ ಮಲ್ಲಿಗವಾಡ, ಕೋಳಿವಾಡ ಗ್ರಾಮಗಳ ಗ್ರಾಮಸ್ಥರ ವಾಹನಗಳಿಗೆ ಮತ್ತು ಮಲ್ಲಿಗವಾಡ- ಹುಬ್ಬಳ್ಳಿ ಬಸ್, ಶಿರಹಟ್ಟಿ-ಹುಬ್ಬಳ್ಳಿ ಬಸ್‌ಗಳಿಗೆ ನಲವಡಿ ಟೋಲ್ ಪ್ಲಾಜಾದಲ್ಲಿ ಉಚಿತವಾಗಿ ಸಂಚಾರಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತ ವೀರೇಶ ಧೂಪದಮಠ ಈ ಕುರಿತು ಮಾಹಿತಿ ನೀಡಿದರು. ಅಣ್ಣಿಗೇರಿ ತಾಲ್ಲೂಕಿನ ನಲವಡಿ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಟೋಲ್ ಪ್ಲಾಜಾದಿಂದ ಕೋಳಿವಾಡ ಕ್ರಾಸ್‌ವರೆಗೆ ಕೇವಲ 2.5 ಕಿ.ಮೀ ದೂರಕ್ಕೆ ಟೋಲ್ ಕಟ್ಟುವ ಪರಿಸ್ಥಿತಿ ಬಂದಿದೆ. ಇದರಿಂದ ಬಸ್ ದರ 14 ರೂ. ಏರಿಕೆಯಾಗಿದ್ದು, ಗ್ರಾಮಸ್ಥರಿಗೆ ಹೊರೆಯಾಗಿದೆ ಎಂದರು.
ಮಲ್ಲಿಗವಾಡ, ಶಿರಹಟ್ಟಿ ಬಸ್‌ಗಳಿಗೆ ಒಂದು ಬಾರಿ ಸಂಚಾರಿಸಿದರೆ 200 ರೂ. ಟೋಲ್ ಶುಲ್ಕ ನಿಗಪಡಿಸಲಾಗಿದೆ. ಒಟ್ಟು 11 ಶಿರಹಟ್ಟಿ ಬಸ್, 1 ಮಲ್ಲಿಗವಾಡ ಬಸ್ ಸೇರಿ 3 ಸರತಿ ಸಾಲಿನಲ್ಲಿ ಸಂಚಾರ ನಡೆಸುತ್ತಿದೆ. ಒಂದು ಬಸ್ 3 ಟ್ರಿಪ್‌ನಂತೆ 6 ಸಲ ಎಂದರೆ 1200 ರೂ. ಹಣ ಪಾವತಿ ಮಾಡಬೇಕು ಎಂದು ವಿವರಿಸಿದರು.

ಟೋಲ್ ಪ್ಲಾಜಾದಿಂದ 20 ಕಿ.ಮೀ ಅಂತರದಲ್ಲಿರುವ ಗ್ರಾಮಗಳಿಗೆ ಪ್ರತಿ ತಿಂಗಳು 315 ರೂ. ಪಾವತಿಸಿದ್ದಾರೆ. ಕಾರು, ವ್ಯಾನ್, ಜೀಪ್, ಲೈಟ್ ಮೋಟಾರ್ ವಾಹನಗಳು ಪಾಸ್ ಪಡೆದು ಸಂಚಾರಿಸಲು ಅವಕಾಶವಿದ್ದರೂ ಸಹ ಇದು ಮಲ್ಲಿಗವಾಡ-ಕೋಳಿವಾಡ ಗ್ರಾಮಸ್ಥರಿಗೆ ಹೊರೆಯಾಗುತ್ತದೆ. ಕೇವಲ 2.5 ಕಿ.ಮೀ ದೂರಕ್ಕೆ ಟೋಲ್ ಕಟ್ಟುವ ಸಂದಿಗ್ಧ ಪರಿಸ್ಥಿತಿ ಬಂದಿದೆ.
ಮಲ್ಲಿಗವಾಡ-ಕೋಳಿವಾಡ ಗ್ರಾಮಗಳು ಹುಬ್ಬಳ್ಳಿ ತಾಲ್ಲೂಕು ಮತ್ತು ಧಾರವಾಡ ಜಿಲ್ಲಾ ಗಡಿ ಪ್ರದೇಶದ ಗ್ರಾಮಗಳಾಗಿವೆ. ನಲವಡಿ ಟೋಲ್ ಪ್ಲಾಜಾ ಗೇಟ್‌ಯಿಂದ 5 ಕಿ. ಮೀ. ಅಂತರದಲ್ಲಿರುವ ಗ್ರಾಮಗಳಿಗೆ ಉಚಿತವಾಗಿ ಸಂಚರಿಸಲು ಕಾನೂನಿನಲ್ಲಿ ಅವಕಾಶವಿದ್ದರೆ ಮಲ್ಲಿಗವಾಡ, ಕೋಳಿವಾಡ ಗ್ರಾಮಸ್ಥರ ವಾಹನಗಳಿಗೆ ಮತ್ತು ಮಲ್ಲಿಗವಾಡ-ಹುಬ್ಬಳ್ಳಿ ಬಸ್, ಶಿರಹಟ್ಟಿ-ಹುಬ್ಬಳ್ಳಿ ಬಸ್‌ಗಳಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ.
ಟೋಲ್ ವಿನಾಯಿತಿ ನೀಡಲು ಸಾಧ್ಯವಿಲ್ಲದಿದ್ದರೆ ನಲವಡಿ ಗ್ರಾಮದಿಂದ ಕೋಳಿವಾಡ ರಸ್ತೆ ಕೂಡುವ 6 ಕಿ. ಮೀ. ಒಳರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿದೆ. ನವಲಗುಂದ ಶಾಸಕರು ಮತ್ತು ಧಾರವಾಡ ಲೋಕಸಭಾ ಸದಸ್ಯರು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
45 ಗ್ರಾಮಗಳು; ನಲವಡಿ ಟೋಲ್ ಗೇಟ್‌ನಿಂದ 20 ಕಿ. ಮೀ. ಅಂತರದಲ್ಲಿರುವ 45ಕ್ಕೂ ಅಧಿಕ ಗ್ರಾಮಗಳಿಗೆ ಈ ಟೋಲ್ ಶುಲ್ಕದಿಂದ ವಿನಾಯಿತಿ ಸಿಗುವುದೇ ಎಂದು ಕಾದು ನೋಡಬೇಕಿದೆ. ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ, ಕೋಳಿವಾಡ, ಉಮಚಗಿ, ಶಿರಗುಪ್ಪಿ, ಇಂಗಳಹಳ್ಳಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಕುಸುಗಲ್, ಹೆಬಸೂರು, ಕಿರೇಸೂರ ಗ್ರಾಮಗಳು.
ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ, ಕೊಂಕಣಕುರಹಟ್ಟಿ, ಕೊಡ್ಲಿವಾಡ ಬರದ್ವಾಡ, ಹಿರೇಗುಂಜಾಳ, ಚಾಕಲಬ್ಬಿ, ಯರಗುಪ್ಪಿ, ಚಿಕ್ಕನರ್ತಿ, ಹಿರೇನರ್ತಿ, ಬಸಾಪುರ, ಯರೇನಾರಾಯಣಪೂರ, ಮುಳ್ಳೋಳ್ಳಿ, ಗುಡೇನಕಟ್ಟಿ ಗ್ರಾಮಗಳು.
ಅಣ್ಣಿಗೇರಿ ತಾಲ್ಲೂಕಿನ ನಲವಡಿ, ಮಣಕವಾಡ, ಶಿಶ್ವಿನಹಳ್ಳಿ, ಬೆನ್ನೂರು, ದುಂಡೂರು, ಬಲ್ಲರವಾಡ, ನಾಗರಹಳ್ಳಿ, ಬೆಳಹಾರ, ಚಿಲಕವಾಡ, ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಸೈದಾಪೂರ, ಮಜ್ಜಿಗುಡ್ಡ, ಭದ್ರಾಪೂರ, ಬಸಪುರ, ಅಣ್ಣಿಗೇರಿ ಗ್ರಾಮಗಳು ಹಾಗೂ ಗದಗ ತಾಲ್ಲೂಕಿನ ಅಂತೂರು, ಬೆಂತೂರು, ನೀಲಗುಂದ, ಕಲ್ಲೂರ, ಮಾಡಳ್ಳಿ ಸೇರಿದಂತೆ 20 ಕಿ. ಮೀ. ಒಳಗೆ ಇರುವ ಅನೇಕ ಗ್ರಾಮಗಳು ಪ್ರತಿ ತಿಂಗಳು 315 ರೂ. ಟೋಲ್ ಪಾವತಿ ಮಾಡುತ್ತಿದ್ದಾರೆ.












Click it and Unblock the Notifications