ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಓಂ ನಮಃ ಶಿವಾಯ ಜೈಕಾರದ ಮೂಲಕ ಅದ್ಧೂರಿಯಾಗಿ ನಡೆದ ತೆಪ್ಪೋತ್ಸವ
ಹುಬ್ಬಳ್ಳಿ, ಸೆಪ್ಟೆಂಬರ್, 01: ಸಾಮಾಜಿಕ ಸಾಮರಸ್ಯದ ಪಾಠ ಮಾಡಿದ ತಾಣ ಶ್ರೀ ಸಿದ್ಧಾರೂಢ ಮಠದ ಅಂಗಳದಲ್ಲಿಂದು (ಶುಕ್ರವಾರ ಸೆಪ್ಟೆಂಬರ್ 01) ಓಂ ನಮಃ ಶಿವಾಯ.. ಓ ನಮಃ ಶಿವಾಯ, ಜೈ ಸಿದ್ಧಾರೂಢ, ಜೈ ಗುರುನಾಥ ರೂಢ ಎಂಬ ಜೈಕಾರ ನಡುವೆ ಅತ್ಯಂತ ಸಂಭ್ರಮ ಸಡಗರದಿಂದ ತೆಪ್ಪೋತ್ಸವ ನೆರವೇರಿತು.
ಸೂರ್ಯ ಮರೆಯಾಗುತಿದ್ದಂತೆ ಇತ್ತ ಶ್ರೀ ಮಠದ ಆವರಣದಲ್ಲಿರುವ ಕೆರೆಯಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿ ಹೊತ್ತ ತೆಪ್ಪ ಮುನ್ನುಗ್ಗಿತು. ಅಪಾರ ಪ್ರಮಾಣದ ಭಕ್ತರು ಭಯಭಕ್ತಿಗಳಿಂದ ಕೈಮುಗಿದು ನಮಸ್ಕರಿಸಿದರು. ತೆಪ್ಪೋತ್ಸವ ದರ್ಶನಕ್ಕೆ ಸೇರಿದ್ದ ಭಕ್ತರು ಶ್ರೀ ಸಿದ್ಧಾರೂಢರ ಮಂತ್ರಗಳನ್ನು ಜಪಿಸಿ, ಭಕ್ತಿ ಮೆರೆದರು. ತೆಪ್ಪೋತ್ಸವ ವೀಕ್ಷಣೆಗೆ ಶುಕ್ರವಾರ ಮಧ್ಯಾಹ್ನದಿಂದಲೇ ಶ್ರೀಮಠಕ್ಕೆ ಭಕ್ತರು ಗುಂಪುಗುಂಪಾಗಿ ಆಗಮಿಸತೊಡಗಿದ್ದರು.

ನಗರವಷ್ಟೇ ಅಲ್ಲದೇ ಧಾರವಾಡ, ಗದಗ, ಹಾವೇರಿ, ಕಾರವಾರ, ಬಾಗಲಕೋಟ ಹಾಗೂ ಮಹಾರಾಷ್ಟ್ರ ತಮಿಳುನಾಡು, ಮಧ್ಯಪ್ರದೇಶ ಹಾಗೂ ದೇಶದ ವಿವಿಧ ಭಾಗಗಳಿಂದ ಭಕ್ತರು ಶ್ರೀ ಮಠಕ್ಕೆ ಆಗಮಿಸಿದ್ದರು. ಬಳಿಕ ಕೆರೆಯಲ್ಲಿ ತೆಪ್ಪೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆಯೇ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಂಬಿ ಹಣ್ಣುಗಳನ್ನು ಎಸೆದರು.
ಶ್ರೀ ಸಿದ್ಧಾರೂಢರ 94ನೇ ಪುಣ್ಯಾರಾಧನೆ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 1 ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ನಡೆಯಿತು. ಐದು ದಿನಗಳ ಪುಣ್ಯಾರಾಧನೆಯಲ್ಲಿ ಇಂಚಲ ಶ್ರೀಗಳು, ಹೊಸದುರ್ಗ ಪುರುಷೋತ್ತಮಾನಂದಪುರಿ ಶ್ರೀಗಳು, ದಯಾನಂದ ಸರಸ್ವತಿ ಶ್ರೀಗಳು, ಚಿತ್ರದುರ್ಗ ಕಬೀರಾನಂದಾಶ್ರಮದ ಶ್ರೀಗಳು, ಘೊಡಗೇರಿ ಶ್ರೀಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಅಲ್ಲದೆ ಕಾರ್ಯಕ್ರಮದಲ್ಲಿ ಟ್ರಸ್ಟ್ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಉಪಾಧ್ಯಕ್ಷ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ವಿನಾಯಕ ಘೊಡ್ಕೆ, ಕಲಬುರ್ಗಿ ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications