ಭಕ್ತಾದಿಗಳೇ ಗಮನಿಸಿ!: ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ, ಡಿಸೆಂಬರ್ 14: ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ಹುಬ್ಬಳ್ಳಿ ನಗರದಿಂದ ಬೆಳಗಾವಿ ಜಿಲ್ಲೆಯ ಸೌದತ್ತಿಯ ಶ್ರೀರೇಣುಕಾ ದೇವಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಸಿಹಿ ಸುದ್ದಿ ಇಲ್ಲಿದೆ.
ಬೆಳಗಾವಿ ಜಿಲ್ಲೆಯ ಸೌದತ್ತಿಯ ಶ್ರೀರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಳೆ (ಡಿಸೆಂಬರ್ 14) ಭಾನುವಾರ ಹುಣ್ಣಿಮೆಯಂದು ಮತ್ತು ಬರುವ ಅಮಾವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಕಳೆದ ಶೀಗಿ ಹುಣ್ಣಿಮೆ, ದೀಪಾವಳಿ ಅಮವಾಸೆ ಹಾಗೂ ನಂತರದ ಹುಣ್ಣಿಮೆಗಳ ಸಮಯದಲ್ಲಿ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ ವಿಶೇಷ ನೇರ ಬಸ್ ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಈ ವಿಶೇಷ ನೇರ ಬಸ್‌ಗಳಿಂದ ಸಾವಿರಾರು ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾಗಿದೆ.
ಬರುವ ಹುಣ್ಣಿಮೆಯ ದಿನ, ಮಂಗಳವಾರ ಹಾಗೂ ಶುಕ್ರವಾರದಂದು ಸಹ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಕೋರಿಕೆ ಬಂದಿರುತ್ತದೆ. ಹೀಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಗೆ ಮುಂದಾಗಿದೆ.
ಭಕ್ತಾದಿಗಳು, ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ ಬರುವ ಹುಣ್ಣಿಮೆಯ ದಿನ 15 ರಂದು ರವಿವಾರ ಹಾಗೂ ಮುಂದಿನ ಅಮವಾಸೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ಅಂದರೆ ಡಿಸೆಂಬರ್ 17, 20, 24 ಹಾಗೂ 27ರಂದು ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ನೇರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ಬಸ್ಸುಗಳು ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಈ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮುಂದುವರೆಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ಅವರು ತಿಳಿಸಿದ್ದಾರೆ.












Click it and Unblock the Notifications