ಬಿಜೆಪಿಗೆ ಯಾರೇ ಸೇರಿದರು 'ವಾಷಿಂಗ್ ಪೌಡರ್ ನಿರ್ಮಾ' ಆಗುತ್ತಾರೆ: ಸಂತೋಷ್ ಲಾಡ್ ವ್ಯಂಗ್ಯ
ಹುಬ್ಬಳ್ಳಿ, ಮಾರ್ಚ್ 25: ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತಾರೆ. ಈಗ ನೋಡಿದರೆ ಭ್ರಷ್ಟಾಚಾರ ಮಾಡಿದವರನ್ನೇ ಪಕ್ಷಕ್ಕೆ ಕರೆತಂದಿದ್ದಾರೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಜಿ.ಜನಾರ್ಧನ್ ರೆಡ್ಡಿ ಅವರ ಬಿಜೆಪಿ ಸೇರ್ಪಡೆ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯಾರೇ ಆಗಲಿ ಬಿಜೆಪಿಗೆ ಸೇರ್ಪಡೆಗೊಂಡರೆ ಶುದ್ಧರಾಗುತ್ತಾರೆ. ಸೇರಿದವರು ವಾಷಿಂಗ್ ಪೌಡರ್ ನಿರ್ಮಾ ಆಗುತ್ತಾರೆ ಎಂದರು. ಇನ್ನು ಚುನಾವಣೆಯಲ್ಲಿ ಬಿಜೆಪಿಗೆ ಸೀಟುಗಳು ಕಡಿಮೆ ಬರುವ ಸರ್ವೇ ರಿಪೋರ್ಟ್ ಬಂದಿದೆ. ಈ ಆಧಾರದಲ್ಲಿಯೇ ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

ಬಿಜೆಪಿಗೆ ದೇಶಾದ್ಯಂತ 200 ಸೀಟು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇಕಡಾ 37 ರಷ್ಟು ಮತಗಳು ಬಂದಿದ್ದವು. ಇದೀಗ ಶೇ.29 ರಷ್ಟು ಮಾತ್ರ ಮತಗಳು ಬರಬಹುದು ಎಂದು ಸರ್ವೇಯಲ್ಲಿ ಹೇಳಿದೆ. ಇದರಡಿ ದೇಶದಾದ್ಯಂತ ಬಿಜೆಪಿಗೆ 200 ಸೀಟುಗಳು ಮಾತ್ರ ಬಿಜೆಪಿಗೆ ಬರಲಿವೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೇಲೆ ನಡೆಯಬೇಕು. ಅದು ಬಿಟ್ಟು ಇದೀಗ ಆರೋಪ ಪ್ರತ್ಯಾರೋಪಗಳ ಮೇಲೆ ನಡೆಯುವಂತಾಗಿದೆ. ಇದು ದುರ್ದೈವ, ವಿಶ್ವ ಗುರು ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಕಾಲದಲ್ಲಿಯೇ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ ಎಂದು ಅವರು ವಾಗ್ದಾಳಿ ನಡೆಸಿದರು.
BSNL ಯಾಕೆ ನಷ್ಟದಲ್ಲಿದೇ?
ಖಾಸಗಿ ಕಂಪನಿಗೆ ಜಾಹಿರಾತು ಕೊಡುವ ಪ್ರಧಾನಿ ಮೋದಿ ಅವರು ಸರ್ಕಾರಿ ಸ್ವಾಮ್ಯದ BSNL ಯಾಕೆ ನಷ್ಟದಲ್ಲಿದೆ? ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಾನು ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ. ಪ್ರಹ್ಲಾದ್ ಜೋಶಿಯವರ ಜೊತೆ ಹಲವು ಬಾರಿ ವಿಮಾನ ಪ್ರಯಾಣ ಮಾಡಿದ್ದೇನೆ. ನಮ್ಮ ನಡುವೆ ನಡೆದ ಸಂವಾದದ ಬಗ್ಗೆ ಪ್ರಹ್ಲಾದ್ ಜೋಶಿಯವರು ತಿರುಚಿ, ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.

ಚುನಾವಣೆ ಎದುರಿಸುವ ಬಗ್ಗೆ ಚರ್ಚೆ
ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ. ಮೇ 7ರವರೆಗೆ ಪಕ್ಷದ ಮುಖಂಡರು ಸೇರಿ ಯಾವ ರೀತಿ ಚುನಾವಣೆ ಎದುರಿಸಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಾರಿ ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ದೇಶದಲ್ಲಿ ಬಿಜೆಪಿ ಸೋಲಲಿದೆ ಎಂದು ಅವರು ಭವಿಷ್ಯ ನುಡಿದರು.
ಕರ್ನಾಟಕದಲ್ಲೂ ಕಾಂಗ್ರೆಸ್ ಅತ್ಯಧಿಕ ಸೀಟುಗಳನ್ನು ಗೆಲ್ಲಲಿದೆ. 4 ಲಕ್ಷ ಅಂತರದಿಂದ ಗೆಲುತ್ತೇವೆ ಎಂದು ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ. ಅವರಿಗೆ ಗೆದ್ದು ಗೆದ್ದು ಅಭ್ಯಾಸ ಇದೆ, 4 ಲಕ್ಷ ಮತಗಳ ಅಂತರದಿಂದ ಎಲ್ಲಿಂದ ಗೆಲ್ಲುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಕೆಲವೆಡೆ ಅಸಮಾಧಾನ
ಧಾರವಾಡ ಟಿಕೆಟ್ ಕೈ ತಪ್ಪಿದ್ದಕ್ಕೆ ಒಂದರಡು ಕಡೆಗಳಲ್ಲಿ ಅಸಮಾಧಾನ ಆಗಿದೆ. ವಿನಯ್ ಕುಲಕರ್ಣಿ ಸೇರಿ ನಮ್ಮ ಪಕ್ಷದ ಮುಖಂಡರು ಮಾತನಾಡುತ್ತಾರೆ. ಅವರಿಗೆ ಸಹಜವಾಗಿ ನೋವಾಗಿರುತ್ತದೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಹೇಳುತ್ತಿಲ್ಲ. ಅವರು ಚರ್ಚೆಗೆ ಬರುತ್ತಿಲ್ಲ. ಬಿಜೆಪಿಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಿಡಿಪಿಯಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ನಾವು ಹಿಂದೆ ಇದೆ. ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಪ್ರಹ್ಲಾದ್ ಜೋಶಿ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.












Click it and Unblock the Notifications