ರಾಹುಲ್ ಗಾಂಧಿ- ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಕೇಳಿದ್ದಕ್ಕೆ ಸಚಿವ ಗರಂ
ಧಾರವಾಡ, ಸೆಪ್ಟಂಬರ್ 11: ಕರ್ನಾಟಕ ರಾಜಕಾರಣದಲ್ಲಿ ಒಂದು ಕಡೆ ಹಗರಣಗಳ ಆರೋಪ ಕೇಳಿ ಬಂದರೆ, ಮತ್ತೊಂದೆಡೆ ಮುಖ್ಯಮಂತ್ರಿ ಕುರ್ಚಿಗಾಗಿ ಅಭಿಮಾನ ಆರಂಭವಾಗಿದೆ. ನನಗೂ ಮುಂದಿನ ಸಿಎಂ ಆಗುವ ಆಸೆ ಇದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಅಮೆರಿಕಾ ಪ್ರವಾಸದಲ್ಲಿರುವ ಡಿಸಿಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭೇಟಿ ಬಗ್ಗೆ ಕೇಳಿದ್ದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗರಂ ಆಗಿದ್ದು ಕಂಡು ಬಂತು.
ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಬಿಜೆಪಿ ಹಗರಣ, ಸಮಿತಿ ರಚನೆ ಸೇರಿದಂತೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ ಅಮೆರಿಕಾದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಭೇಟಿ ಬಗ್ಗೆ ಕೇಳಿದಾಗ ಗರಂ ಆದರು.

ಹೌದು, ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್ ಅವರು ಅಮೇರಿಕಾದಲ್ಲಿ ಭೇಟಿ ಆಗಿದ್ದರಲ್ಲಿ ಕುತಹೂಲ ಏನಿಲ್ಲ. ರಾಹುಲ್ ಗಾಂಧಿಯವರು ನಮ್ಮ ನಾಯಕರು. ಅವರನ್ನು ಭೇಟಿ ಆಗಿದ್ದರಲ್ಲಿ ತಪ್ಪೇನಿದೆ. ಭೇಟಿಯಾಗಿದ್ದು ಖುಷಿ ವಿಚಾರ, ಇದರಲ್ಲಿ ಕುತೂಹಲ ಏನಿಲ್ಲ. ಈ ಬಗ್ಗೆ ಬಿಜೆಪಿಯವರಿಗೆ ಕುತೂಹಲ ಇದೆ. ಆದರೆ ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಮತ್ತಷ್ಟು ಪ್ರಶ್ನೆ ಮಾಡುತ್ತಿದ್ದಂತೆ ಪದೇ ಪದೇ ಅದನ್ನೆ ಕೇಳ ಬೇಡಿ ಎಂದು ಗರಂ ಆದರು.
ಬಿಜೆಪಿ ಹಗರಣಗಳ ತನಿಖೆಗೆ ಸಮಿತಿ ರಚನೆ
ಬಿಜೆಪಿ ಹಗರಣಗಳ ಬಗ್ಗೆ ಸಮಿತಿ ರಚನೆ ಮಾಡಿದ್ದು ನಮ್ಮ ಸಮತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ. ಬಿಜೆಪಿಯಲ್ಲಿನ ಹಗರಣಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ನಮಗೆ ತಾಕೀತು ಮಾಡಿದ್ದಾರೆ.
ಹಗರಣ ಪ್ರಕರಣಗಳ ಸಮನ್ವಯ ಸಮಿತಿ ಸದಸ್ಯನನ್ನಾಗಿ ನನ್ನನ್ನು ಸಹ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ. ಇನ್ನೂ ಸಮಿತಿ ಅಧ್ಯಕ್ಷರಾಗಿ ಗೃಹ ಸಚಿವರಾದ ಜಿ. ಪರಮೇಶ್ವರ, ಸಚಿವ ಎಚ್.ಕೆ.ಪಾಟೀಲ ಅವರಿದ್ದಾರೆ. ಅವರು ಹಿರಿಯರು ಅವರು ಸಭೆ ಕರೆದಾಗ ಹೋಗುತ್ತೇವೆ ಎಂದು ವಿವರಿಸಿದರು.

ಬಿಜೆಪಿಗೆ ಸೋಲು: ಲಾಡ್ ಭವಿಷ್ಯ
ಹರಿಯಾಣ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಲ್ಲಾಡುತ್ತದೆ.
ಈ ಬಗ್ಗೆ ಬಿಜೆಪಿಯವರಿಗೆ ಕೇಳಬೇಕು. ಈಗಾಗಲೇ ಬಿಜೆಪಿಯವರ ನಂಬರ್ ಕಡಿಮೆ ಇವೆ. ಸದ್ಯದ ಸರ್ವೆ ವರದಿಗಳ ಪ್ರಕಾರ, ಎಲ್ಲಾ ಕಡೆ ಬಿಜೆಪಿ ಸೋಲುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ನಮಗೇನು ಭಯ ಇಲ್ಲ, ಭಯ ಎಲ್ಲ ಅವರಿಗೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 136 ಜನ ಶಾಸಕರಿದ್ದೇವೆ ಐದು ವರ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಜನರಲ್ ಸೆಕ್ರೆಟರಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಎಲ್ಲ ಶಾಸಕರು, ಸಚಿವರು, ಸಂಸದರು, ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿದ್ದೇವೆ. ನಾವು ಅವರ ಪರವಾಗಿ ಗಟ್ಟಿಯಾಗಿರುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ಪತನ ಶೀಘ್ರ: ಬಿಜೆಪಿಗೆ ಪ್ರಶ್ನೆ ಮಾಡಿ
ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ, ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಆ ರೀತಿ ಹೇಳಿದ್ದರ ಬಗ್ಗೆ ಬಿಜೆಪಿ ನಾಯಕರನ್ನೇ ಕೇಳಬೇಕು.
ಮುಂಬರಲಿರುವ ದೀಪಾವಳಿಗೆ ಕರ್ನಾಟಕ ರಾಜ್ಯ ಸರ್ಕಾರ ಪತನ ಎಂದು ಸಿ.ಟಿ.ರವಿ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಇವರು ಎರಡು ವರ್ಷದಿಂದ ಹೇಳುತ್ತಿದ್ದಾರೆ. ಇದೇನು ಹೊಸದಲ್ಲ? ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರ ಪತನ ಆಗಲಿದೆ ಎಂದು ನಾನು ಹೇಳಿದ್ದೇನೆ ಈ ಬಗ್ಗೆ ಸಿಟಿ ರವಿ ಅವರನ್ನು ನೀವು ಕೇಳಬೇಕು ಎಂದು ಹೇಳಿದರು.












Click it and Unblock the Notifications