Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್: ಕಾಂಗ್ರೆಸ್ ಗೆದ್ದರೂ ಜಗದೀಶ್ ಶೆಟ್ಟರ್ ಹಿನ್ನಡೆಗೆ ಕಾರಣಗಳೇನು?
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಶನಿವಾರ, ಮೇ 13) ಪ್ರಕಟವಾಗುತ್ತಿದ್ದು, ಕಾಂಗ್ರೆಸ್‌ನ ಅಭ್ಯರ್ಥಿಗಳು ರಾಜ್ಯಾದ್ಯಂತ ಮುನ್ನಡೆ ಕಾಯ್ದುಕೊಂಡಿದ್ದರೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರ ಹಿನ್ನಡೆ ಅನುಭವಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲು ಅಂಚೆ ಮತಗಳನ್ನು ಎಣಿಸಲಾಯಿತು. ಸದ್ಯ ಬೆಳಗ್ಗೆ 10 ಗಂಟೆಯವರೆಗೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಭಾರೀ ಮುನ್ನಡೆ ಪಡೆದುಕೊಂಡಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ವಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಸತತ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರು ಸತತವಾಗಿ ಮೇಲುಗೈ ಸಾಧಿಸುತ್ತಿದ್ದಾರೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಹೇಶ್ ಟೆಂಗಿನಕಾಯಿ ಬೆಳಗ್ಗೆ 10 ಗಂಟೆ ವೇಳೆಗೆ 7000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಹಿನ್ನಡೆಗೆ ಕಾರಣಗಳೇನು?
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಹಿನ್ನಡೆಗೆ ಹಲವು ಕಾರಣಗಳನ್ನು ನೋಡಬಹುದು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸಂಘ ಪರಿವಾರ ಗಟ್ಟಿ ನೆಲೆ ಇದೆ ಎಂಬುದು ಸಾಬೀತಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶವನ್ನು ಮತದಾರರು ಮತ್ತು ಕಾರ್ಯಕರ್ತರು ರವಾನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವು ಹಿಂದಿನಿಂದಲೂ ಬಿಜೆಪಿ ಪಕ್ಷದ ಭದ್ರಕೋಟೆಯಾಗಿ ಉಳಿದಿದೆ. ಜಗದೀಶ್ ಶೆಟ್ಟರ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೂ, ಬಿಜೆಪಿಗೆ ಯಾವುದೇ ನಷ್ಟವಾಗಿಲ್ಲ ಎನ್ನಲಾಗುತ್ತದೆ.

ಇನ್ನು ಬಿಜೆಪಿ ಹೊಸ ಮುಖ ಮಹೇಶ್ ಟೆಂಗಿನಕಾಯಿಗೆ ಕ್ಷೇತ್ರದ ಮತದಾರರು ಮಣೆ ಹಾಕಿದ್ದಾರೆ. ಜಗದೀಶ್ ಶೆಟ್ಟರ್ ಶಿಷ್ಯ ಎಂದೇ ಪ್ರಸಿದ್ಧಿಯಾಗಿದ್ದ ಮಹೇಶ್ ಟೆಂಗಿನಕಾಯಿ ಅವರು ಗುರುವಿನ ವಿರುದ್ಧವೇ ಸ್ಪರ್ಧಿಸಿದ್ದರು.
ಇನ್ನು ಜಗದೀಶ್ ಶೆಟ್ಟರ್ ಸೋಲಿಸಲು ಆರ್‌ಎಸ್‌ಎಸ್ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ. ಇದರ ಹೊರತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷೇತ್ರದಲ್ಲಿ ಹಲವು ಬಾರಿ ಸಭೆ ನಡೆಸಿ ರಣತಂತ್ರ ರೂಪಿಸಿದ್ದರು.
ಅಷ್ಟೇ ಅಲ್ಲದೆ, ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಪ್ರಲ್ಹಾದ ಜೋಶಿ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೆಣೆದ ರಣತಂತ್ರಕ್ಕೆ ಜಗದೀಶ್ ಶೆಟ್ಟರ್ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೋಲಿಸಲು ಖುದ್ದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪಣ ತೊಟ್ಟಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರದ ಲಿಂಗಾಯತ ನಾಯಕರ ಸಭೆ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಸೂಚಿಸಿದ್ದರು.












Click it and Unblock the Notifications