Ranya Rao Gold Smuggling Case: ನಟಿ ರನ್ಯಾ ರಾವ್‌ಗೆ ಪ್ರೋಟೋಕಾಲ್ ಕೊಟ್ಟಿದ್ದು ಯಾರು ?
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಪ್ರಕರಣವು ಇದೀಗ ರಾಜ್ಯ ಸರ್ಕಾರಕ್ಕೆ ಸಂಕಷ್ಟವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಇದೀಗ ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹ್ಯಾಂಡ್ಲಿಂಗ್ ವಿಫಲವಾಗಿದೆ. ಯಾರನ್ನೋ ರಕ್ಷಣೆ ಮಾಡುವ ಗೊಂದಲದಲ್ಲಿ ಸರ್ಕಾರ ಹೊರಟಿದೆ. ರಾಜ್ಯ ಸರ್ಕಾರ ಪ್ರಕರಣ ನಿರ್ವಹಿಸುವ ರೀತಿ ಯಾರನ್ನೋ ರಕ್ಷಣೆ ಮಾಡಲು ಹೊರಟಿರೋದು ಸ್ಪಷ್ಟವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೂರಿದ್ದಾರೆ.
ನಟಿ ರನ್ಯಾ ರಾವ್ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಇದರಲ್ಲಿ ಪ್ರಭಾವಿಗಳು ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಪ್ರಹ್ಲಾದ ಜೋಶಿ ಅವರು,ರಾಜಕಾರಣಿಗಳು ಹಾಗೂ ಮಂತ್ರಿಗಳಿದ್ದಾರೆ ಎನ್ನುವ ವರದಿಗಳು ಬರ್ತಿವೆ. ಇದೊಂದು ದೇಶದ್ರೋಹದ ಕೆಲಸ. ಗೋಲ್ಡ್ ಯಾರಿಗೆ ಹೋಗುತ್ತೆ, ಅಲ್ಲಿಂದ ಬರೋ ದುಡ್ಡು ಎಲ್ಲಿ ಹೋಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹಣ ದೇಶ ವಿರೋಧಿ ಕೃತ್ಯಕ್ಕೆ ಬಳಕೆ ಆಗುತ್ತಿತ್ತೇ. ಇಲ್ಲ ನಕ್ಸಲ್ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತೇ ಎನ್ನುವುದು ಗೊತ್ತಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ. ಅವರಿಗೆ ಪ್ರೋಟೋಕಾಲ್ ಕೊಟ್ಟಿದ್ದು ಯಾರು. ಯಾರು ಜವಾಬ್ದಾರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮಂತ್ರಿಗಳ ಇದ್ದಾರೆ ಎನ್ನುವ ಗುಮಾನಿ ಈಗ ಹೆಚ್ಚಾಗುತ್ತಿದೆ. ಒಬ್ಬರು ಸಿಐಡಿಗೆ ಕೊಟ್ಟಿದ್ದಾರೆ ಅಂತಾರೆ. ಇನ್ನೊಬ್ಬರು ಕೊಟ್ಟಿಲ್ಲ ಅಂತಾರೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಪ್ರಹ್ಲಾದ ಜೋಶಿ ಅವರು ಆಗ್ರಹಿಸಿದ್ದಾರೆ.

ಗೃಹ ಸಚಿವ ಡಾ. ಜಿ ಪರಮೇಶ್ವರ ಅವರೇ ಜವಬ್ದಾರಿಯಿಂದ ಮಾತನಾಡಿ. ನೀವು ಒತ್ತಡಕ್ಕೆ ಹೇಳಿಕೆ ಕೊಡಬೇಡಿ ಅನ್ನೋದು ನಮ್ಮ ಅಸೆ, ಅಪೇಕ್ಷೆ. ನೀವು ಜಂಟಲ್‌ಮನ್ ರಾಜಕಾರಣಿ. ರನ್ಯಾ ರಾವ್ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಂದುವರಿದು ರಾಜ್ಯ ಸರ್ಕಾರ ಗ್ಯಾರಂಟಿಗಳ ಸಂಪೂರ್ಣ ಅನುಷ್ಠಾನ ಮಾಡುತ್ತಿಲ್ಲ. ಜನವರಿ, ಫೆಬ್ರುವರಿ ಗೃಹ ಲಕ್ಷ್ಮಿ ಹಣ ಇಲ್ಲಿಯ ವರೆಗೆ ಬಾಕಿ ಇದೆ. ಒಬ್ಬ ಮಂತ್ರಿ ಅದೇನು ಸಂಬಳವೇ ಎಂದು ಕೇಳುತ್ತಾರೆ. ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ 31 ಜಿಲ್ಲೆಯ ಅಧ್ಯಕ್ಷರಿಗೆ 50 ಸಾವಿರ ಕೊಡುತ್ತಿದ್ದಾರೆ. ತಿಂಗಳಿಗೆ ಗ್ಯಾರಂಟಿ ಸಮಿತಿಗೆ 30 ಲಕ್ಷ ಕೊಡುತ್ತಿದ್ದಾರೆ. ಕೇವಲ ಜಿಲ್ಲಾ ಸಮಿತಿಯವರಿಗೆ ಕೊಡುತ್ತಿದ್ದಾರೆ. ಇದರಿಂದ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿಗೂ ಹೆಚ್ಚು ಖರ್ಚಾಗುತ್ತಿದೆ. ಒಂದು ವರ್ಷಕ್ಕೆ ತಾಲ್ಲೂಕ ಸಮಿತಿ ಅಧ್ಯಕ್ಷರಿಗೆ 25 ಸಾವಿರ ರೂಪಾಯಿ, 225 ತಾಲ್ಲೂಕಿಗೆ 56 ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಸದಸ್ಯರಿಗೆ ತಲಾ ಒಂದು ಸಾವಿರ ಇವರು ಗ್ಯಾರಂಟಿ ಸಮಿತಿಗೆ 13 ಕೋಟಿ ಭತ್ಯೆ ಕೊಡುತ್ತಿದ್ದಾರೆ. ಲೆಕ್ಕ ತಗೆದರೆ ಇದನ್ನು ಕೊಡಲಿಕ್ಕೆ ಹಣ ಎಲ್ಲಿಂದ ಬರುತ್ತೆ ಎನ್ನುವುದು ತಿಳಿಯಲಿದೆ.

ನಿಮ್ಮ ಅಧಿಕಾರಿಗಳು ಯಾವ ಕೆಲಸ ಮಾಡ್ತಾರೆ. ಶಾಸಕರು ಮಂತ್ರಿಗಳು ಏನ್ ಮಾಡ್ತಾರೆ. ಅವರೇನೂ ಕತ್ತೆ ಕಾಯುತ್ತಿದ್ದಾರೆಯೇ ? ಅವರ ಕೆಟ್ಟ ಕೆಲಸ ಸಮರ್ಥನೆ ಮಾಡಲು ಏನಾದರೂ ಸುಳ್ಳು ಹೇಳ್ತಾರೆ ಎಂದಿದ್ದಾರೆ. ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗೆ ವೈಪರ್ ಹಾಕುವುದಕ್ಕೂ ಇವರ ಬಳಿ ದುಡ್ಡಿಲ್ಲ. ಸರ್ಕಾರಿ ಇಲಾಖೆಗಳ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಕರೆಂಟ್ ಬಿಲ್ ತುಂಬೋಕು ಹಣ ಇಲ್ಲ. ಸರ್ಕಾರಿ ಬಸ್‌ಗಳಿಗೆ ಡಿಸೇಲ್ ಹಾಕೋಕು ದುಡ್ಡಿಲ್ಲ. ಶಾಲಾ ಮಕ್ಕಳ ಸಮಯಕ್ಕೆ ಸರಿಯಾದ ಬಸ್ ಇಲ್ಲ. ಈ ಬಗ್ಗೆ ನೆನ್ನೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ ಎಂದರು.
ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಜನ ನಿಮ್ಮನ್ನು ಮತ್ತೆ ಗೆಲ್ಲಿಸಲಿದ್ದಾರೆ. ಯಾವ ರಾಜ್ಯದಲ್ಲಿ ಇರಲಾರದ್ದು ಕರ್ನಾಟಕದಲ್ಲಿ ಯಾಕೆ. ರಾಹುಲ್ ಗಾಂಧಿ ಅವರು ಗ್ಯಾರಂಟಿ ಸಮಿತಿ ಅನುದಾನದ ಬಗ್ಗೆ ಹೇಳಬೇಕು. ಇದು ರಾಜ್ಯದ ಜನರಿಗೆ ಬಗೆದಿರುವ ದ್ರೋಹ. ದೊಡ್ಡದಾಗಿ ಮಾತನಾಡುವ ರಾಹುಲ್ ಗಾಂಧಿ ಹೇಳಬೇಕು. ಜನರಿಗೆ ಕಾಂಗ್ರೆಸ್ ತೀವ್ರ ದ್ರೋಹ ಮಾಡುತ್ತಿದೆ. ಇನ್ನು ಧರ್ಮಾಧಾರಿತ ಮೀಸಲಾತಿ ಒಪ್ಪೋಕೆ ಸಾಧ್ಯವೇ ಇಲ್ಲ. ನಾವು ಈ ಸಂಬಂಧ ಕಾನೂನುತ್ಮಾಕ ಹೋರಾಟ ಮಾಡುತ್ತೇವೆ. ಜಮೀರ್ ಅಹ್ಮದ್ ಹೇಳಿದ ತಕ್ಷಣ ಯಾವುದೂ ಇಲ್ಲಿ ಆಗಲ್ಲ. ನಿಮ್ಮ ಎಡವಟ್ಟಿನಿಂದ ಅನೇಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ನಾನೇ ಮುಖ್ಯಮಂತ್ರಿ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇ ಅಧಿಕಾರದಲ್ಲಿ ಇರುತ್ತೇನೆ ಎನ್ನುವುದು ಒಂದು ದೊಡ್ಡ ಸಮಸ್ಯೆ. ಡಿ.ಕೆ ಶಿವಕುಮಾರ್ ಹಾಗೂ ಬೆಂಬಲಿಗರು ಇದನ್ನು ಹೇಳಬೇಕು. ನೀವೇ ಇರಬೇಕು ಅನ್ನೋದು ನಮ್ಮ ಆಶಯ. ಚೆನ್ನಾಗಿ ಕೆಲಸ ಮಾಡಿ,ಲೂಟಿ ಮಾಡಬೇಡಿ ಎಂದು ಕಾಲೆಳೆದಿದ್ದಾರೆ.
40 ಪರ್ಸೆಂಟ್ ಕಮೀಷನ್ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಯುತವಾಗಿ ತನಿಖೆ ಆಗಬೇಕು. ರಿಪೋರ್ಟ್ ಮಂಡಿಸಲಿ. ಯಾರಿಗೆ ನೀವು ಈ ಸಂಬಂಧ ನೋಟಿಸ್ ಕೊಟ್ಟಿದೀರಿ. ನಮಗೆ ಗೊತ್ತಿರೋ ಹಾಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಆರೋಪ ಬಂದವರಿಗೆ ನೋಟಿಸ್ ಕೊಟ್ಟಿಲ್ಲ. ಮೊದಲು ನೋಟಿಸ್ ಕೊಡಿ. ನೋಟಿಸ್ ಬಂದ ಮೇಲೆ ನಾವು ಉತ್ತರ ಕೊಡುತ್ತೇವೆ. ಗೊಡ್ಡು ಬೆದರಿಕೆಗೆ ನಾವ ಹೆದರಲ್ಲ ಎಂದು ಸವಾಲು ಹಾಕಿದ್ದಾರೆ.
ಹುಬ್ಬಳ್ಳಿ ಪ್ಲೈಓವರ್ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಲು ನಿತೀನ್ ಗಡ್ಕರಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಇದು ನ್ಯಾಷನಲ್ ಹೈವೆ ಹಾಗೂ ಸ್ಟೇಟ್ ಹೈವೆ ಸಂಬಂಧಿಸಿದಲ್ಲ. ನಾವು ಹಣವನ್ನು ಮಾತ್ರ ಕೊಟ್ಟಿದ್ದೇವೆ. ವಿಶೇಷ ಪ್ರಕರಣ ಅಂತ ಪರಿಗಣಿಸಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ದೋಷವಿದೆ. ಅದಷ್ಟು ಬೇಗ ಕಾಮಗಾರಿ ತ್ವರಿತವಾಗಿ ಮುಗಿಸಿಕೊಡಬೇಕು ಎಂದಷ್ಟೇ ಹೇಳಿದರು.












Click it and Unblock the Notifications