Idgah Maidan: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಮರೂಪಿ ಗಣಪ ?
Hubli Idgah Maidan: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದೆ. ಈದ್ಗಾ ಮೈದಾನದಲ್ಲಿ ಈ ಬಾರಿ ರಾಮ ಗಣಪ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ರಾಣಿ ಚನ್ನಮ್ಮ ಗಜಾನನ ಉತ್ಸವ ಮಹಾಮಂಡಳಿಗೆ ಹುಬ್ಬಳ್ಳಿ - ಧಾರವಾಡ ಪಾಲಿಕೆ ಅನುಮತಿ ನೀಡಿದೆ. ಹೀಗಾಗಿ, ಮಂಡಳಿಯು ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಶ್ಯವಿರುವ ಎಲ್ಲಾ ಮಾದರಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೆ. ರಾಮ ಗಣಪನ ಬರುವಿಕೆಗಾಗಿ ಹುಬ್ಬಳ್ಳಿಯ ಜನ ಕಾಯುತ್ತಿದ್ದಾರೆ.
ಈದ್ಗಾ ಮೈದಾನದಲ್ಲಿ ರಾಮನ ಅವತಾರದ ಗಣೇಶಮೂರ್ತಿ
Ganesha: ಇನ್ನು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಮನ ಅವತಾರದ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವುದು ಹಾಗೂ ಈ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಮಹಾಮಂಡಳಿ ನಿರ್ಧರಿಸಿದೆ. ಇಲ್ಲಿನ ಹುಬ್ಬಳ್ಳಿ ಮರಾಠಗಲ್ಲಿಯಲ್ಲಿ ಮೂರ್ತಿ ತಯಾರಾಗುತ್ತಿದೆ. ಸೆಪ್ಟೆಂಬರ್ 6ರಂದು ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯ ಮೂರು ಸಾವಿರಮಠಕ್ಕೆ ತರಲು ನಿರ್ಧರಿಸಲಾಗಿದೆ. ಇದಾದ ನಂತರ ಹಬ್ಬದ ದಿನದ (ಸೆಪ್ಟೆಂಬರ್ 7) ಬೆಳಿಗ್ಗೆ ಶುಭ ಮಹೂರ್ತದಲ್ಲಿ ಗಣಪನಮೂರ್ತಿ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯ ನಂತರ ಮೈದಾನದಲ್ಲಿ ರಾಮನ ಅವತಾರದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ ಹೇಳಿದ್ದಾರೆ.

ವಿವಿಧ ಧಾರ್ಮಿಕ ಕಾರ್ಯಕ್ರಮ
ಗಣೇಶ ಹಬ್ಬ (ಗಣೇಶ ಚತುರ್ಥಿ) ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ವಿವಿಧ ವಿಶೇಷ ಧಾರ್ಮಿಕ ಪೂಜೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಗಣಹೋಮ, ಗಂಗಾರತಿ, ಅನ್ನಸಂತರ್ಪಣೆ ಹಾಗೂ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 9ರಂದು ಮುಂಜಾನೆ 11.55ಕ್ಕೆ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೈದಾನದಿಂದ ಹೊರಡಲಿದೆ.
ಮೂರನೇ ಬಾರಿ ಗಣೇಶಮೂರ್ತಿ ಪ್ರತಿಷ್ಠಾಪನೆ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಈ ಬಾರಿಯೂ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂಲಕ ಮೂರನೇ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದಂತಾಗುತ್ತದೆ. 2022ರಲ್ಲಿ ಮೊದಲ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾದನದಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರದಲ್ಲಿ 2023 ಹಾಗೂ 2024ನೇ ಈ ವರ್ಷದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಮುಂದುವರಿದಿದೆ. ಕಳೆದ ಎರಡು ವರ್ಷದಲ್ಲೂ ಈದ್ಗಾ ಮೈದಾದನಲ್ಲಿ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆದಿತ್ತು. ಹುಬ್ಬಳ್ಳಿಯ ಎಲ್ಲಾ ಸಮುದಾಯದ ಜನರು ಸಹಕಾರ ನೀಡಿದ್ದರು. ಅಲ್ಲದೇ ಯಾವುದೇ ಗೊಂದಲಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಹುಬ್ಬಳ್ಳಿ - ಧಾರವಾಡ ಪಾಲಿಕೆ, ಪೊಲೀಸರು ನೋಡಿಕೊಂಡಿದ್ದರು. ಈ ಬಾರಿಯೂ ಅದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈದ್ಗಾಗೆ ಯಾವ ದ್ವಾರದ ಮೂಲಕ ಪ್ರವೇಶ
ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಸ್ಥಳೀಯ ಆಡಳಿತ ಮಾಡಿಕೊಂಡಿದೆ. ಹುಬ್ಬಳ್ಳಿ - ಧಾರವಾಡ ಪಾಲಿಕೆಯು ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದೆ. ಮೈದಾನದ ಉತ್ತರ ಹಾಗೂ ದಕ್ಷಿಣದ್ವಾರವನ್ನು ಈ ಸಮಯದಲ್ಲಿ ಮುಚ್ಚಲಾಗುತ್ತದೆ. ಪೂರ್ವದ್ವಾರದ ಮೂಲಕ ಮೈದಾನ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದುವರಿದು ಮೈದಾನದಲ್ಲಿರುವ ಕಟ್ಟಡವನ್ನೂ ಸೇರಿದಂತೆ ಶೇ 70ರಷ್ಟು ಭಾಗದಲ್ಲಿ 20 ಅಡಿ ಎತ್ತರದಷ್ಟು ಪರದೆ ಕಟ್ಟಲಾಗುತ್ತಿದೆ. ಇನ್ನುಳಿದ ಭಾಗವನ್ನು ಗಣೇಶಮೂರ್ತಿ ಪ್ರತಿಷ್ಠಾಪನೆ ಮಡಲಿರುವ ಸಮಿತಿಗೆ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯಿಂದ ಪರದೆ ಕಟ್ಟಿಸುವ ಹಾಗೂ ಕಂಬಗಳಿಂದ ಬ್ಯಾರಿಕೇಡ್ ನಿರ್ಮಾಣ ಮಾಡುವ ಕೆಲಸ ಪ್ರಾರಂಭವಾಗಿದೆ.












Click it and Unblock the Notifications