"ದಕ್ಷಿಣ ಭಾರತಕ್ಕೆ ಅನ್ಯಾಯವಾಗಲ್ಲ"
ದಕ್ಷಿಣ ಭಾರತದಲ್ಲಿ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯದಲ್ಲಿ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಯೂ ಒಂದಾಗಿದೆ. ಈ ರೀತಿ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ, ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ವಾದಿಸುತ್ತಿವೆ. ಆದರೆ, ಲೋಕಸಭೆ ಕ್ಷೇತ್ರಗಳ ವಿಂಗಡಣೆಯಾದರೆ ಯಾವುದೇ ಬದಲಾವಣೆ ಆಗಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳಿದೆ. ಇದೀಗ ಅಚ್ಚರಿಯ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೊಟ್ಟಿದ್ದಾರೆ.
ರಾಜ್ಯ ರಾಜಕೀಯ ಹಾಗೂ ಲೋಕಸಭೆ ಕ್ಷೇತ್ರಗಳ ಮರುವಿಂಗಡೆಯ ಬಗ್ಗೆ ಅವರು ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಗ್ಗಟ್ಟಾಗಿ ಹೋಗಬೇಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ರಾಷ್ಟ್ರೀಯ ಅಧ್ಯಕ್ಷರು ಆ ಮಾತು ಹೇಳಿದ್ದಾರೆ ಎಂದಾದರೆ ಇವಾಗ ಒಗ್ಗಟ್ಟು ಇಲ್ಲ ಅಂತಲೇ ಅರ್ಥ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಖರ್ಗೆ ಅವರ ವಿಡಿಯೋ ನೋಡಿದ್ದೇನೆ. ಅವರು ಒಗ್ಗಟ್ಟಿಲ್ಲ ಅಂತ ರಾಷ್ಟ್ರೀಯ ನಾಯಕರು ಒಪ್ಪಿಕೊಂಡಿದ್ದು. ನಮ್ಮ ಪೂಜ್ಯ ತಂದೆ ಇನ್ನು ಮೂರು ಬಜೆಟ್ ಮಂಡನೆ ಮಾಡ್ತಾರೆ ಅಂತಾ ಮುಖ್ಯಮಂತ್ರಿ ಅವರ ಪುತ್ರ ಹೇಳ್ತಾರೆ. ಮತ್ತೊಂದು ಕಡೆ ಡಿಕೆ ಶಿವಕುಮಾರ್ ಬಜೆಟ್ ಮಂಡನೆ ಮಾಡ್ತಾರೆ ಅಂತಾ ಕೆಲವರು ಹೇಳ್ತಾರೆ. ಖರ್ಗೆ ಅವರು ಹಿಂದೆಯೂ ಇದರ ಬಗ್ಗೆ ಮಾತಾಡಿದ್ದರು. ಒಟ್ಟಾರೆ ಖರ್ಗೆ ಅವರ ಮಾತಿನ ಅರ್ಥ ಹಿಂದೆಯೂ ಒಗ್ಗಟ್ಟಾಗಿ ಹೋಗಿಲ್ಲ,ಇವಾಗ ಒಗ್ಗಟ್ಟಾಗಿ ಹೋಗಲ್ಲ. ಮುಂದೆನೂ ಹೋಗಲ್ಲ ಎಂದು ಜೋಶಿ ವ್ಯಂಗ್ಯವಾಡಿದರು.
ಲೋಕಸಭೆ ಕ್ಷೇತ್ರ ವಿಂಗಡಣೆಯ ಬಗ್ಗೆ ಅಚ್ಚರಿಯ ಹೇಳಿಕೆ
ಇನ್ನು ಲೋಕಸಭೆ ಕ್ಷೇತ್ರಗಳ ವಿಂಗಡಣೆಯ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಜೋಶಿ ಅವರು, ಡಿ ಲಿಮಿಟೇಶನ್ ವಿಚಾರದಲ್ಲಿ ರಾಜಕಾರಣ ಮಾಡೋದು ಒಳ್ಳೆದಲ್ಲ ಎಂದಿದ್ದಾರೆ. ನಾವು ದಕ್ಷಿಣ ಭಾರತದವರು. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸಂಸದರಿದ್ದೇವೆ. ಕರ್ನಾಟಕದಲ್ಲಿ 1996ರಿಂದ ನಾವೇ ಹೆಚ್ಚು ಎಂಪಿಗಳಿದ್ದೇವೆ. ಯಾವ ವ್ಯತ್ಯಾಸವೂ ಆಗಲ್ಲ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ನಮ್ಮ ಬಳಿ ದುಡ್ಡು ಇಲ್ಲ ಅಂದಿದ್ದಾರೆ. ಕಾಂಗ್ರೆಸ್ ಸರ್ಕಾರ ತಮ್ಮ ಪೆಲ್ಯೂವರ್ ಮುಚ್ಚಿಕೊಳ್ಳಲು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ಎಂ.ಕೆ ಸ್ಟಾಲಿನ್ ಸರ್ಕಾರ ಸಹ ಭ್ರಷ್ಟ ಸರ್ಕಾರ ಆಗಿದ್ದು. ಅವರಿಗೆ ಉದ್ಯೋಗ ಇಲ್ಲ ಎಂದ ಅವರು ಚರ್ಚೆ ಆಗಬೇಕಾಗಿರೋದು ಒನ್ ನೇಷನ್ ಒನ್ ಚುನಾವಣೆ ಅಲ್ಲ. ಗ್ಯಾರಂಟಿ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ.
ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ವಿಚಾರದಲ್ಲಿ ಉತ್ತರ ಭಾರತ vs ದಕ್ಷಿಣ ಭಾರತ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎನ್ನುವ ಆತಂಕವನ್ನು ದಕ್ಷಿಣ ಭಾರತದ ರಾಜ್ಯಗಳು ವ್ಯಕ್ತಪಡಿಸಿವೆ.












Click it and Unblock the Notifications