ರಾಷ್ಟ್ರಪತಿಗಳಿಂದ ಪತ್ರ ಬಂದರೂ ಬಿಲ್ ಪಾವತಿ ಮಾಡದ ಅಧಿಕಾರಿಗಳು: ಗುತ್ತಿಗೆದಾರನ ಅಳಲು
ಹುಬ್ಬಳ್ಳಿ, ಡಿಸೆಂಬರ್ 16 : ಸಾಲ ಮಾಡಿ ಕೊರೊನಾ ಸಮಯದಲ್ಲಿ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ಕೋವಿಡ್ ಪರಿಕರಗಳನ್ನು ನೀಡಿದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದ ಕಾರಣ ರಾಷ್ಟ್ರಪತಿ ಅವರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದರು.
ರಾಷ್ಟ್ರಪತಿ ಭವನದಿಂದ ಈತನಿಗೆ ಬಿಲ್ ಪಾವತಿ ಮಾಡಬೇಕೆಂದು ಪತ್ರ ಬಂದರೂ ಕೂಡ ಈ ಇಲಾಖೆಗಳು ಬಿಲ್ ಪಾವತಿ ಮಾಡುತ್ತಿಲ್ಲವೆಂದು ಗುತ್ತಿಗೆದಾರರು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿ ನಿವಾಸಿ ಬಸವರಾಜ ಅಮರಗೋಳ ಕೋವಿಡ್ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ, ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು. 2 ವರ್ಷ ಗತಿಸಿದರೂ ಕೂಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈವರೆಗೂ ಬಿಲ್ ಪಾವತಿ ಮಾಡಿಲ್ಲ.

ಇದರಿಂದ ಮನನೊಂದ ಬಸವರಾಜ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ರಾಷ್ಟ್ರಪತಿ ಭವನದ ಅಧಿಕಾರಿಗಳು ಈ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಬೇಕೆಂದು ಆದೇಶ ಪತ್ರ ನೀಡಿದ್ದರು. ರಾಷ್ಟ್ರಪತಿ ಭವನದಿಂದ ಆದೇಶ ಬಂದರೂ ಸಹ ಅಧಿಕಾರಿಗಳು ಬಸವರಾಜಗೆ ಬಿಲ್ ಪಾವತಿ ಮಾಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಸಾಲ ಸೂಲ ಮಾಡಿದ್ದರಿಂದ ಸಾಲಗಾರರು ಕಿರುಕುಳ ನೀಡುತ್ತಿದ್ದಾರೆ. ನನ್ನ ಜೀವಕ್ಕೆ ಹಾನಿಯಾದರೆ ಇದಕ್ಕೆ ಕಡೂರು ಹಾಗೂ ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯತಿ, ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಇಓ ಅವರೇ ಕಾರಣ ಎಂದು ಬಸವರಾಜ ನೋವು ತೋಡಿಕೊಂಡಿದ್ದಾರೆ.
ಕೋವಿಡ್ ಸಮಯದಲ್ಲಿ ಪರಿಕರಗಳನ್ನು ನೀಡಿದ್ದರೂ, ಈವರೆಗೂ ಬಿಲ್ ಪಾವತಿ ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಗಮನ ಹರಿಸಿ ಗುತ್ತಿಗೆದಾರನಿಗೆ ನ್ಯಾಯ ಕೊಡಿಸಬೇಕಾಗಿದೆ.












Click it and Unblock the Notifications