Gold-Cash Return: ಚಿನ್ನಾಭರಣ, ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್
ಹುಬ್ಬಳ್ಳಿ, ಮೇ 05: ವಾಯುವ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನ-ಬೆಳ್ಳಿಯ ಒಡವೆ ಹಾಗೂ ನಗದು ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ NWKRTC ಸಂಸ್ಥೆಯ ಚಾಲಕ ಕಂ ನಿರ್ವಾಹಕರು ಪ್ರಾಮಾಣಿಕತೆ ಮರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು, ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಕೆ ಎ 25 ಎಫ್ 32 81 ಸಂಖ್ಯೆಯ ನಿರ್ವಾಹಕ ರಹಿತ ನಾನ್ ಸ್ಟಾಪ್ ಬಸ್ ಶನಿವಾರ ಬೆಳಗ್ಗೆ ಹಾವೇರಿ-ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್‌ನಿಂದ ಇಳಿಯುವಾಗ ಪ್ರಯಾಣಿಕರೊಬ್ಬರು ಪರ್ಸ್ ಬಿಟ್ಟು ಇಳಿದಿದ್ದರು.

ಅದನ್ನು ಬೇರೊಬ್ಬ ಮಹಿಳೆ ತೆಗೆದೆಕೊಳ್ಳುವುದನ್ನು ಗಮನಿಸಿದ ಅದೇ ಬಸ್‌ನಲ್ಲಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಪರ್ಸ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ. ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕಮ್ ನಿರ್ವಾಹಕರಾದ ಎಂ.ಎಸ್. ಹಬ್ಬದ ಅವರು ಪರ್ಸ್ ತೆರೆದು ನೋಡಿದ್ದಾರೆ.
ಬೆಳ್ಳಿ, ಬಂಗಾರ ಮತ್ತು ನಗದು
ಆ ಪರ್ಸ್‌ನಲ್ಲಿ ಒಟ್ಟು 40ಗ್ರಾಂ ಚಿನ್ನದ ಸರ, 16ಗ್ರಾಂ ಜುಮಿಕಿ, 100 ಗ್ರಾಂ ಬೆಳ್ಳಿಯ ಕಾಲು ಚೈನುಗಳು ಹಾಗೂ ರೂ. 500 ನಗದು ಹಣ ಇರುವುದು ಕಂಡು ಬಂದಿದೆ.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ನಿಲ್ದಾಣಾಧಿಕಾರಿ ವಿ.ಎಸ್. ಹಂಚಾಟೆ ರವರ ಸಮಕ್ಷಮದಲ್ಲಿ ವಾರಸುದಾರ ಪ್ರಯಾಣಿಕರಾದ ನಿರ್ಮಲ ಚಂದ್ರಶೇಖರಯ್ಯ ಹಿರೇಮಠ ಎಂಬುವವರಿಗೆ ಒಡವೆ ಹಾಗೂ ನಗದು ಹಣವನ್ನು ಹಿಂದಿರುಗಿಸಲಾಯಿತು. ಅಧಿಕಾರಿಗಳು ಬಸ್ ಕಂಡಕ್ಟರ್ ಪ್ರಾಮಾಣಿಕತೆಯನ್ನು ಅಭಿನಂದಿಸಿದ್ದಾರೆ.

ಒಡವೆ-ಹಣ ಪಡೆದು ಮಾತನಾಡಿದ, ನಿರ್ಮಲ ಚಂದ್ರಶೇಖರಯ್ಯ ಹಿರೇಮಠ ಅವರು, ನಿರ್ಮಲ ರವರು ಮಾತನಾಡಿ ಮೂಲತಃ ಹಾವೇರಿಯವರಾದ ತಾವು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ಮಗ ಹಾಗೂ ಮಗಳನ್ನು ಗದಗ ಜಿಲ್ಲೆಯ ಹೊಸೂರಿನಲ್ಲಿ ಹಾಸ್ಟೆಲ್ ಗೆ ಬಿಡಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹಾವೇರಿಗೆ ಬಂದಿದ್ದು, ಶನಿವಾರ ಅಕ್ಕನೊಂದಿಗೆ ಹಾವೇರಿಯಿಂದ ಹೊಸೂರಿಗೆ ಹೋಗುತ್ತಿದ್ದೆವು. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಬಸ್ ಬದಲಾಯಿಸಿ ಗದಗ ಬಸ್ಸಿನಲ್ಲಿ ಪ್ರಯಾಣ ಮುಂದುವರೆಸಿದ್ದೆವು.
ಧನ್ಯವಾದ ಅರ್ಪಿಸಿದ ಒಡೆವ ಪಡೆದ ಮಹಿಳೆ
ಟಿಕೆಟ್ ಪಡೆಯುವಾಗ ಪರ್ಸ್ ಬಿಟ್ಟು ಬಂದಿದ್ದು ಗಮನಕ್ಕೆ ಬಂದಿದೆ. ಲಕ್ಷಾಂತರ ಮೌಲ್ಯದ ಒಡವೆ ಹಾಗೂ ನಗದು ಹಣ ಕಳೆದು ಹೋಗಿದ್ದರಿಂದ ಏನು ಮಾಡಬೇಕೆಂದು ತೋಚದೇ ತುಂಬಾ ಗಾಬರಿಯಾಗಿತ್ತು. ಮರಳಿ ಸಿಕ್ಕಿದ್ದರಿಂದ ಹೋದ ಜೀವ ಬಂದಂತಾಗಿದೆ. ಚಾಲಕ ಕಂ ನಿರ್ವಾಹಕರಾದ ಹಬ್ಬದ ರವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಅಪಾರ ಮೌಲ್ಯದ ಒಡವೆ ಮತ್ತು ನಗದು ಹಣ ಹಿಂದಿರುಗಿಸಿದ ಚಾಲಕ ಕಂ ಕಂಡಕ್ಟರ್ ಎಂ.ಎಸ್. ಹಬ್ಬದ ಅವರ ಸತ್ಯನಿಷ್ಟೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಸ್ ಪ್ರಯಾಣದ ವಿಶ್ವಾಸಾರ್ಹತೆ ಹಾಗೂ ಸದಭಿಪ್ರಾಯ ಹೆಚ್ಚಿಸಿದೆ. ಅವರ ಪ್ರಯಾಣಿಕ ಸ್ನೇಹಿ ವರ್ತನೆ ಇತರ ನೌಕರರಿಗೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications