ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಧಾರವಾಡದಲ್ಲಿ ಮಳೆಗಾಲಕ್ಕೆ ಸಿದ್ಧತೆಯೇ ಇಲ್ಲವಲ್ಲಪ್ಪೋ!

By ಬಸವರಾಜ ಮರಳಿಹಳ್ಳಿ
|
Google Oneindia Kannada News

ಹುಬ್ಬಳ್ಳಿ ಜೂನ್ 8: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆದಿಯಾಗಿ ಎಲ್ಲ ಜನಪ್ರತಿನಿಧಿಗಳು ಹಾಗೂ ಆಯುಕ್ತರವರೆಗಿನ ಅಧಿಕಾರಿಗಳು ಸದ್ಯಕ್ಕೆ ಸ್ಮಾರ್ಟ್ ಸಿಟಿ ಕನವರಿಕೆಯಲ್ಲಿದ್ದಾರೆ. ಮುಂಗಾರು ಆರಂಭವಾಗಿದ್ದರೂ 'ತುರ್ತು ರಕ್ಷಣಾ ಪಡೆ' (ಟಾಸ್ಕ್ ಫೋರ್ಸ್) ತಂಡ ರಚನೆಗೆ ಮುಂದಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ರಾಜ್ಯದ ಹಲವಡೆ ಮುಂಗಾರು ರೌದ್ರಾವತಾರ ತಾಳಿದ್ದರೂ ಎಚ್ಚೆತ್ತುಕೊಳ್ಳದ ಇಲ್ಲಿನ ಸ್ಥಳೀಯಾಡಳಿತದ ನಡೆ ಜನರ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ ಎರಡ್ಮೂರು ಬಾರಿ ಸುರಿದ ಬೇಸಿಗೆ ಮಳೆ ನಿರ್ವಹಣೆಗೆ ಸುಸ್ತಾಗಿರುವ ಮಹಾನಗರ ಪಾಲಿಕೆ ನಾಲ್ಕು ತಿಂಗಳ ಕಾಲ ಸುರಿಯುವ ಮಳೆ ಪರಿಣಾಮಗಳನ್ನು ಹೇಗೆ ಎದುರಿಸಲಿದೆ ಎಂಬುದು ಈಗಿನ ಪ್ರಶ್ನೆಯಾಗಿದೆ.[ಮುಂಗಾರಿಗೆ ಕ್ಷಣಗಣನೆ : ಕುಮಟಾದಲ್ಲಿ ಭರ್ಜರಿ 14 ಸೆಂ.ಮೀ. ಮಳೆ]

ರಭಸದ ಮಳೆಯ ಜತೆಗೆ ಬಿರುಗಾಳಿಯೂ ಬೀಸುವುದರಿಂದ ನಗರ ಪ್ರದೇಶದಲ್ಲೂ ಊಹಿಸಲಾಗದಷ್ಟು ಹಾನಿ ಸಂಭವಿಸುತ್ತವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸಲೆಂದೇ ಸರಕಾರ ಪ್ರತಿವರ್ಷ ಟಾಸ್ಕ್ ಫೋಸ್ ರಚಿಸಿ, ದಿನದ ಇಪ್ಪತ್ನಾಲ್ಕು ಗಂಟೆ ಎಚ್ಚರಿಕೆಯಿಂದಿರುವಂತೆ ಸ್ಥಳೀಯ ಆಡಳಿತಕ್ಕೆ ಸುತ್ತೋಲೆ ಹೊರಡಿಸುತ್ತದೆ.

ಆದರೆ, ಈ ಸುತ್ತೋಲೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಅವಳಿ ನಗರದ ಮಹಾನಗರ ಪಾಲಿಕೆ ನಡೆದುಕೊಳ್ಳುತ್ತಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಿದ ಜನತೆ ಈಗ ಮಳೆ ಆವಾಂತರಗಳನ್ನು ಎದುರಿಸುವ ಆತಂಕದಲ್ಲಿದೆ.

ಟಾಸ್ಕ್ ಫೋರ್ಸ್‌ ಯಾರು ಇರುತ್ತಾರೆ?

ಟಾಸ್ಕ್ ಫೋರ್ಸ್‌ ಯಾರು ಇರುತ್ತಾರೆ?

ಮಳೆಗಾಲ ಪೂರ್ವ ಹಾಗೂ ಮಳೆಗಾಲದಲ್ಲಿ ತುರ್ತು ಕಾರ್ಯ ಕೈಗೊಳ್ಳಲು ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಹನ್ನೊಂದು ಸದಸ್ಯರ ಸಮಿತಿಯೊಂದನ್ನು ರಚಿಸಲಾಗುತ್ತದೆ.

ಅರಣ್ಯ ಇಲಾಖೆ, ಪಾಲಿಕೆ ಆರೋಗ್ಯ ನಿರೀಕ್ಷಕರು, ಆರೋಗ್ಯಾಧಿಕಾರಿ, ವಲಯ ಕಚೇರಿ ಸಹಾಯಕ ಆಯುಕ್ತರು, ಹೆಸ್ಕಾಂ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇರುವ ಈ ತಂಡ ಪ್ರತಿದಿನ ಸಭೆ ಕರೆದು, ನಗರದಲ್ಲಿ ಕೈಗೊಳ್ಳಬೇಕಾದ ಹಾಗೂ ಕೈಗೊಂಡಿರುವ ಕಾರ್ಯದ ಕುರಿತು ಸಮಾಲೋಚನೆ ನಡೆಸುತ್ತದೆ.

ಕಳೆದ ವರ್ಷ ಸಹ ಪಾಲಿಕೆ ಸಾಕಷ್ಟು ಅನಾಹುತವಾದ ನಂತರ ಟಾಸ್ಕ್ ಫೋರ್ಸ್ ರಚನೆ ಮಾಡಿತ್ತು. ಪ್ರಸ್ತುತ ವರ್ಷ ಅಕಾಲಿಕ ಮಳೆಗೇ ಸಾಕಷ್ಟು ಅನಾಹುತ ನಡೆದು ಹೋಗಿದೆ. ಆದರೂ ಪಾಲಿಕೆ ಆಡಳಿತ ಈ ಕುರಿತು ಇನ್ನೂ ಕ್ರಮ ವಹಿಸಿಲ್ಲ.

ಮಾಹಿತಿ ಇಲ್ಲದ ವಲಯಾಧಿಕಾರಿಗಳ ವಿಶೇಷ ತಂಡ

ಮಾಹಿತಿ ಇಲ್ಲದ ವಲಯಾಧಿಕಾರಿಗಳ ವಿಶೇಷ ತಂಡ

ಮೇ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಟಾಚಾರಕ್ಕೆಂಬಂತೆ ಟಾಸ್ಕ್ ಫೋರ್ಸ್ ವಿಷಯ ಚರ್ಚೆಗೆ ಬಂದಿತ್ತಾದರೂ ವಲಯವಾರು ತಂಡ ರಚನೆ ಮಾಡಿ ತುರ್ತು ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಚರ್ಚೆಯನ್ನೇ ಮುಕ್ತಾಯ ಮಾಡಲಾಯಿತು.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ವಲಯಾಧಿಕಾರಿ ನೇತೃತ್ವದಲ್ಲಿ ಹನ್ನೆರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮೇಯರ್ ಡಿ.ಕೆ. ಚವ್ಹಾಣ ಹೇಳುತ್ತಾರಾದರೂ ಆ ತಂಡ ಎಲ್ಲಿ, ಹೇಗೆ, ಯಾವಾಗ, ಏನು ಕಾರ್ಯ ಕೈಗೊಳ್ಳುತ್ತಿದೆ ಎನ್ನುವುದು ಮಾತ್ರ ಅವಳಿನಗರದ ಯಾವೊಬ್ಬ ಸಾರ್ವಜನಿಕರ ಗಮನಕ್ಕೂ ಈವರೆಗೆ ಬಂದಿಲ್ಲ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]

ರಸ್ತೆ ಅಗೆಯುವ ಯೋಜನೆಗಳಿಂದ ಅನಾಹುತ

ರಸ್ತೆ ಅಗೆಯುವ ಯೋಜನೆಗಳಿಂದ ಅನಾಹುತ

ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳ್ಳುವ ಪೂರ್ವವೇ ಅವಳಿನಗರದ ಅಭಿವೃದ್ಧಿಗೆ ಒಳಚರಂಡಿ, ನಿರಂತರ ಕುಡಿಯುವ ನೀರು ಪೂರೈಕೆ, ಮನೆ ಮನೆಗೆ ನೇರ ಗ್ಯಾಸ್ ಪೈಪ್‌ಲೈನ್ ಸಂಪರ್ಕ, ಬಿಆರ್ ಟಿಎಸ್ ಯೋಜನೆಗಳು ಪ್ರಗತಿಯಲ್ಲಿವೆ. ಇವುಗಳ ಜೊತೆಗೆ ಖಾಸಗಿ ಟೆಲಿಕಾಂ ಕಂಪನಿಗಳು ಕೇಬಲ್ ಅಳವಡಿಸುವ ಸಂಬಂಧ ನಗರದ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ.

ಹೀಗೆ ಹಾನಿಗೀಡಾದ ರಸ್ತೆಗಳು ಮಾತ್ರ ಮತ್ತೆ ಹಳೆ ಸ್ವರೂಪವನ್ನು ಪಡೆಯುವುದು ದುಸ್ತರದ ಮಾತು. ಕೇವಲ ಮಣ್ಣು ಮುಚ್ಚಿ ಕೈ ತೊಳೆದುಕೊಳ್ಳುವ ಅಧಿಕಾರಿಗಳ ನಡೆಯಿಂದ ಮಳೆಗಾಲ ಎದುರಿಸುವುದು ಸಾರ್ವಜನಿಕರಿಗೆ ಸವಾಲಿನ ಕೆಲಸವಾಗಿದೆ.

ಇನ್ನು ನಗರದ ದುರ್ಗದ ಬಯಲು, ಜನತಾ ಬಜಾರ ಹಾಗೂ ಇನ್ನಿತರ ಪ್ರಮುಖ ಮಾರುಕಟ್ಟೆ ಪ್ರದೇಶಗಳ ಅಕ್ಕಪಕ್ಕದಲ್ಲಿರುವ ಚರಂಡಿಗಳೆಲ್ಲ ಹೂಳು ತುಂಬಿವೆ. ಪರಿಣಾಮ ಮ್ಯಾನ್‌ಹೋಲ್ ತುಂಬಿ ಉಕ್ಕಿ ಹರಿಯುತ್ತಿವೆ. ಒಳಚರಂಡಿ ಕಾಮಗಾರಿ ನಡೆದ ಪ್ರದೇಶಗಳಲ್ಲೆಲ್ಲ ಗಟಾರವೇ ನಾಪತ್ತೆಯಾಗಿದೆ.

ಕೇಶ್ವಾಪುರ, ಯಲ್ಲಾಪುರ ಓಣಿ, ಸ್ಟೇಶನ್ ರಸ್ತೆ, ಗಣೇಶಪೇಟೆ, ಅರವಿಂದ ನಗರ, ವಿದ್ಯಾನಗರದ ಸುತ್ತಮುತ್ತಲಿನ ಪ್ರದೇಶದಲ್ಲಿನ ಒಳಚರಂಡಿಯ ಮ್ಯಾನ್ ಹೋಲ್ ಸದಾ ಉಕ್ಕಿ ಹರಿದು ರಸ್ತೆಯ ಮೇಲೆ ಓಡಾಡದಂತೆ ಮಾಡುತ್ತವೆ.

ಕಣ್ಣಿದ್ದು ಕುರುಡರಂತೆ

ಕಣ್ಣಿದ್ದು ಕುರುಡರಂತೆ

ಕೇಶ್ವಾಪುರದಿಂದ ಗೋಪನಕೊಪ್ಪದವರೆಗಿನ ಮುಖ್ಯ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಎರಡ್ಮೂರು ತಿಂಗಳ ಹಿಂದಷ್ಟೇ ಅಗೆದು ಮುಚ್ಚಲಾಗಿತ್ತು. ಈಗ ಮತ್ತೆ ಅದೇ ರಸ್ತೆಯನ್ನು ಗ್ಯಾಸ್ ಪೈಪ್‌ಲೈನ್‌ಗಾಗಿ ಅಗೆದು ಮಣ್ಣನ್ನೆಲ್ಲ ರಸ್ತೆಯ ಅಕ್ಕಪಕ್ಕ ರಾಶಿ ಹಾಕಲಾಗುತ್ತಿದೆ.

ಹಾಗೋ ಹೀಗೋ ಒಂದಿಷ್ಟು ಮಳೆ ನೀರು ಸರಾಗವಾಗಿ ಹರಿಯುತ್ತಿದ್ದ ಗಟಾರಗಳೆಲ್ಲ ಈಗ ಸಂಪೂರ್ಣ ಮುಚ್ಚಿ ಹೋಗಿವೆ. ಇನ್ನೇನು ಮಳೆ ಸುರಿಯಿತು ಎಂದಾದರೆ, ಸುತ್ತಮುತ್ತಲಿನ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ. ಇಂಥ ಹಲವು ಉದಾಹರಣೆಗಳು ಪಾಲಿಕೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಕಂಡರೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.[ಹವಾಮಾನ ಇಲಾಖೆ ಆಶ್ವಾಸನೆ ಹುಸಿ? ಮುಂಗಾರು ವಿಳಂಬ?]

ಡಿ.ಕೆ. ಚವ್ಹಾಣ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್

ಡಿ.ಕೆ. ಚವ್ಹಾಣ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್

ಮಳೆಗಾಲದ ಮುಂಜಾಗ್ರತೆಗಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಂತೆ ಈಗಾಗಲೇ ವಲಯಾಧಿಕಾರಿಗಳ ನೇತೃತ್ವದಲ್ಲಿ ಹನ್ನೊಂದು ತಂಡಗಳನ್ನು ರಚಿಸಲಾಗಿದೆ. ಸದ್ಯದಲ್ಲಿಯೇ ತುರ್ತು ನಿರ್ವಹಣಾ ತಂಡ(ಟಾಸ್ಕ್ ಫೋರ್ಸ್) ರಚನೆ ಮಾಡಿ, ದಿನದ ಇಪ್ಪತ್ನಾಲ್ಕು ಗಂಟೆ ಕಾಲವೂ ಎಚ್ಚರಿಕೆಯಿಂದಿರಲು ಸೂಚಿಸಲಾಗುವುದು.

ಸಾಧನ-ಸಲಕರಣೆಗಳ ಅಗತ್ಯವಿದೆ

ಸಾಧನ-ಸಲಕರಣೆಗಳ ಅಗತ್ಯವಿದೆ

ವಿಜಯ ಗುಂಟ್ರಾಳ, ಪೌರಕಾರ್ಮಿಕರ ಮುಖಂಡ

ಮಳೆಗಾಲಕ್ಕೆ ಸಂಬಂಧಿಸಿದಂತೆ ಪಾಲಿಕೆ ಪೌರ ಕಾರ್ಮಿಕರಿಗೆ ವಿತರಿಸಬೇಕಾದ ಜೀವ ರಕ್ಷಕ ಸಾಮಗ್ರಿಗಳನ್ನು ಇನ್ನೂ ವಿತರಿಸಿಲ್ಲ. ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಬೇಕಾದರೆ ನಮಗೂ ಸಾಧನ-ಸಲಕರಣೆಗಳ ಅಗತ್ಯವಿದ್ದು, ಪಾಲಿಕೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಹನುಮಂತಪ್ಪ ಭಜಂತ್ರಿ, ಹಳೇ ಹುಬ್ಬಳ್ಳಿ ನಿವಾಸಿ

ಹನುಮಂತಪ್ಪ ಭಜಂತ್ರಿ, ಹಳೇ ಹುಬ್ಬಳ್ಳಿ ನಿವಾಸಿ

ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಅನಾಹುತಗಳಿಂದ ಮಹಾನಗರ ಪಾಲಿಕೆ ಪಾಠ ಕಲಿಯಬೇಕಿತ್ತು. ಆದರೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ದೊಡ್ಡ ಸಾಧನೆ ಎಂಬಂತೆ ನಡೆದುಕೊಳ್ಳುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಳೆ ಅನಾಹುತಗಳನ್ನು ತಡೆಯಲು ಹಾಗೂ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲು ಮುಂದಾಗಬೇಕು.

English summary
There is no sufficient preparation by Hubballi- Dharwad corporation for monsoon season. People panic and asking questions about corporation effort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X