ಸಿದ್ದರಾಮಯ್ಯ ಒಬ್ಬರಿಗೇ 14 ಸೈಟ್ ಕೊಟ್ಟಿಲ್ಲ: ಇದರಲ್ಲಿ ನಮ್ಮ ಸಿಎಂ ಪಾತ್ರವಿಲ್ಲ: ಜಮೀರ್ ಅಹ್ಮದ್
ಹುಬ್ಬಳ್ಳಿ, ಸೆಪ್ಟಂಬರ್ 01: ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್ ನವರು ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ಪರವಾಗಿ ಸಚಿವರು ಧ್ವನಿ ಎತ್ತುತ್ತಿದ್ದಾರೆ. ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಅವರು ಮಾತನಾಡಿ ಸಿಎಂ ಸಿದ್ದರಾಮಯ್ಯ ಟಗರು ಇದ್ದಂಗೆ ಅವರಿಗೆ ಯಾರು ಏನು ಮಾಡಲು ಆಗಲ್ಲ ಎಂದು ಸವಾಲು ಹಾಕಿದ್ದಾರೆ.
ಭಾನುವಾರ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, 2021 ರಲ್ಲಿ 14 ಸೈಟ್ ಸಿಎಂ ಪತ್ನಿಗೆ ಕೊಡಲಾಗಿದೆ ಎಂಬ ವಿಚಾರ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿದ್ದರು. ಅಷ್ಟು ನಿವೇಶನಗಳಲ್ಲಿ ಮುಖ್ಯಮಂತ್ರಿ ಒಬ್ಬರಿಗೆ ಕೊಟ್ಟಿಲ್ಲ. 125 ಜನರಿಗೆ ಸೈಟ್ ಕೊಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯನವರ ಪಾತ್ರವೇನಿದೆ?

ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರಿಗೆ ಉರುಳಾಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ಟಗರು ಇದ್ದಂತೆ ಅವರು ಭಯ ಬೀಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಬಿಜೆಪಿಗೆ ಏನು ಮಾಡಿಕೊಳ್ಳಲಾಗಲ್ಲ: ಜಮೀರ್
ಯಾರೋ ಒಬ್ಬರು ದೂರು ಕೊಟ್ಟರೆಂದು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಯಾಕೆ ಕೊಟ್ಟರು. ಈ ಹಿಂದೆ ಎಚ್‌ಡಿ ಕುಮಾರಸ್ವಾಮಿ ಮೇಲಿನ ಪ್ರಕರಣಕ್ಕೆ ನೀವು ತನಿಖೆಗೆ ಯಾಕೆ ಅನುಮತಿ ಕೊಡಲಿಲ್ಲ ಎಂದು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದರು. ಮುಡಾ ವಿಚಾರದಲ್ಲಿ ಆರೋಪಿ ಮಾಡಿರುತ್ತಿರುವ ಬಿಜೆಪಿಯವರಿಂದ ಸಿಎಂ ವಿರುದ್ಧ ಏನು ಮಾಡಲು ಆಗಲ್ಲ ಎಂದು ತಿರುಗೇಟು ಕೊಟ್ಟರು.

ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಕೊಟ್ಟಂತೆ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರಗೇಶ್ ನಿರಾಣಿ ಮೇಲೆ ಯಾಕೆ ಪ್ರಾಸಿಕ್ಯೂಷನ್ ಅನುಮತಿ ಕೊಡಲಿಲ್ಲ. ಇದು ರಾಜ್ಯಪಾಲರ ತಾರತಮ್ಯ ನೀತಿ ಅಲ್ಲವೇ?. ನೀವು ಏನೆ ಮಾಡಿದರೂ ಸಿಎಂ ಕುರ್ಚಿ ಅಲುಗಾಡಿಲು ಆಗದು ಎಂದು ಹೇಳಿದರು.
ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ: ಜಮೀರ್
ಸದ್ಯ ಭಾರತೀಯ ಜನತಾ ಪಕ್ಷದ ನಾಯಕರ ಆಟ ಏನು ನಡೆಯುವುದಿಲ್ಲ. ಈ ಕಾರಣದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀರಿ ಎಂದು ದೂರಿದರು.
ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ಪತನವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದಂತಿದೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿದೆ. ಈ ಉದ್ದೇಶದಿಂದಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ನಾವು ರಾಜಭವನ ಚಲೋ ಮಾಡಿದೆವು ಎಂದರು.












Click it and Unblock the Notifications