ಧಾರವಾಡದ ಕಲಘಟಗಿಯ 70ಕ್ಕೂ ಹೆಚ್ಚು ಜನ ಆಸ್ಪತ್ರೆಗೆ: ಗ್ರಾಮಕ್ಕೆ ಗ್ರಾಮವೇ ಕಂಗಾಲು!
ಧಾರವಾಡದ ಗ್ರಾಮವೊಂದರ ಜನ ಸಾಲು ಸಾಲಾಗಿ ಆಸ್ಪತ್ರೆ ಸೇರುತ್ತಿದ್ದು, ಇದರಿಂದ ಈ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ 70ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟಕ್ಕೂ ಧಾರವಾಡದ ಕಲಘಟಗಿಯಲ್ಲಿ ಏನಾಗ್ತಿದೆ, ಇಲ್ಲಿನ ಜನ ಆಸ್ಪತ್ರೆಗೆ ಸೇರುವಂತಹ ಸಮಸ್ಯೆ ಏನಾಗಿದೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಕಳೆದ 15 ದಿನಗಳಿಂದಲೂ ಬಿಟ್ಟು ಬಿಡದಂಗೆ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಲೇ ಪರೋಕ್ಷವಾಗಿ ಈ ಭಾಗದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಇರುವ ಕೆರೆಗಳಿಂದ ಗ್ರಾಮಗಳಿಗೆ ಬರುತ್ತಿರುವ ನೀರು ಕಲುಷಿತಗೊಂಡಿದೆ. ಇದರಿಂದ ಹುಬ್ಬಳ್ಳಿ ಸಮೀಪದ ಕಲಘಟಗಿ ತಾಲ್ಲೂಕಿನ ಮುತ್ತಗಿ ಗ್ರಾಮದ 70ಕ್ಕೂ ಹೆಚ್ಚು ಜನ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಲಘಟಗಿ ತಾಲ್ಲೂಕಿನ ಮುತ್ತಗಿ ಗ್ರಾಮದ ಜನರು ಅಶುದ್ಧ ನೀರು ಕುಡಿದು ವಾಂತಿ ಭೇದಿಯಂತಹ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಎರಡು ಓವರ್ ಹೆಡ್ ನೀರಿನ ಟ್ಯಾಂಕ್‌ಗಳು ಗಲೀಜಿನಿಂದ ಕೂಡಿವೆ. ಟ್ಯಾಂಕ್‌ನಲ್ಲಿ ಹಸಿರು ಪಾಚಿ ಕಟ್ಟಿಕೊಂಡಿದೆ. ಅಲ್ಲದೇ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಬೀಳುತ್ತಿವೆ. ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ ಗಬ್ಬು ನಾರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ನೀರು ಕಲುಷಿತ ಆಗಿರುವುದರಿಂದ ಧಾರವಾಡದ ಕಲಘಟಗಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದ ಕಳ್ಳಿಓಣಿ, ಪ್ಲಾಟ್ ಓಣಿ, ಗೌಡ್ರ ಓಣಿ ಸೇರಿದಂತೆ ಹಲವು ಭಾಗದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮಕ್ಕೆ ಕೊಳವೆಬಾವಿ ನೀರು ಸರಬರಾಜಿನಿಂದ ರೋಗ ಹೆಚ್ಚಾಗುವುದಕ್ಕೆ ಕಾರಣ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ: ಇನ್ನು ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದಂತೆಯೇ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಇಬ್ಬರು ವೈದ್ಯರನ್ನು ಗ್ರಾಮದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಮನೆ ಮನೆಗೆ ಒಆರ್‌ಎಸ್ ಹಾಗೂ ಮಾತ್ರೆಗಳನ್ನು ನೀಡುತ್ತಿದ್ದೇವೆ. ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಆ ನೀರನ್ನು ಬಳಕೆ ಮಾಡಬಾರದೆಂದು ಈಗಾಗಲೇ ಗ್ರಾಮದ ಜನರಿಗೆ ಹೇಳಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಇಒ ಪರಶುರಾಮ ಸಾವಂತ ತಿಳಿಸಿದ್ದಾರೆ.
ಕಳೆದ ಮುರನಾಲ್ಕು ದಿನಗಳಿಂದ ವಾಂತಿ ಭೇದಿ ಹೆಚ್ಚಾಗಿದೆ. ಇದರಿಂದ ಗ್ರಾಮದ ಹಿರಿಯರು ಹಾಗೂ ಸಣ್ಣ ಮಕ್ಕಳು ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನ ಆರೋಗ್ಯ ಸಮಸ್ಯೆಯಿಂದ ಒದ್ದಾಡ್ತಿದ್ದಾರೆ. ಇದಕ್ಕೆ ಗ್ರಾಮಕ್ಕೆ ಬಿಡುವ ಕುಡಿಯೋ ನೀರು ಕಾರಣ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೋದ ಮಂಗೋಜಿ ಹೇಳಿದ್ದಾರೆ. ಇವರು ಸಹ ಕುಡಿಯುವ ನೀರಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ಇನ್ನು ಈ ಭಾಗದಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಟ್ಯಾಂಕ್‌ಗಳನ್ನು ಸಕಾಲದಲ್ಲಿ ಸ್ವಚ್ಛ ಮಾಡಿದ್ದರೆ. ಈ ಸಮಸ್ಯೆ ಆಗ್ತಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಗ್ರಾಮದ ಹಿರಿಯರು ಹಾಗೂ ಮಕ್ಕಳಿಗೆ ಆರೋಗ್ಯ ಸಮಸ್ಯೆ ಆಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications