RSSನಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿ ಮಾತನಾಡಲು ಹೇಳಿದ್ದಾರಾ?: ಸಚಿವ ಶಿವರಾಜ್ ತಂಗಡಗಿ
ಹುಬ್ಬಳ್ಳಿ, ಡಿಸೆಂಬರ್ 25: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿಯ ಸುವರ್ಣ ಸೌಧದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಪ್ರಕರಣ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಈ ಪ್ರಕರಣ ರಾಜ್ಯಾದಂತ್ಯ ಸದ್ದು ಮಾಡುತ್ತಿದೆ. ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಅವರಿಗೆ ಸುಳ್ಳು ಹೇಳಲು ಒಂದು ಕ್ಲಾಸ್ ಇದೆ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಳ್ಳು ಹೇಳುವ ಟ್ರೈನಿಂಗ್ ಕೊಡಲು ಒಂದು ಇನ್ಸ್ಟಿಟ್ಯೂಟ್ ಇದ್ದು. ಆ ಇನ್ಸ್ಟಿಟ್ಯೂಟ್‌ನಲ್ಲಿ ಕಲಿತು ಬಂದ ಗಿರಾಕಿ ಸಿ.ಟಿ ರವಿ, ಆ ಇನ್ಸ್ಟಿಟ್ಯೂಟ್‌ನ ಆರ್‌ಎಸ್‌ಎಸ್‌ನ ಒಂದು ಬ್ರಾಂಚ್ ಅದು ನಾಗಪುರದಲ್ಲಿದೆ. ಆರ್‌ಎಸ್‌ಎಸ್‌ನಲ್ಲಿ ಟ್ರೈನಿಂಗ್‌ನಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮಾತನಾಡಲು ಹೇಳಿದ್ದಾರಾ? ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧ ಲೇವಡಿ ಮಾಡಿದರು.

ಬಿಜೆಪಿ ನಾಯಕರು ಸಿ.ಟಿ ರವಿ ಅವರಿಗೆ ಕರೆದು ಬುದ್ಧಿ ಹೇಳುವುದು ಬಿಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ಸಿ.ಟಿ ರವಿ ಮಾಡಿದ್ದೆ ಸರಿ ಎನ್ನುವಂತೆ ಮಾಡುತ್ತಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾದಲ್ಲಿರುವ ತಾಯಂದಿರೇ ಸಿ.ಟಿ ರವಿಗೆ ಬುದ್ಧಿ ಹೇಳಬೇಕು ಎಂದು ಹೇಳಿದರು.
ಇನ್ನು ಪ್ರಹ್ಲಾದ್ ಜೋಶಿ ಅವರು ಸೀನಿಯರ್ ಅವರ ಬಾಯಿಯಿಂದ ಇಂತಹ ಮಾತುಗಳು ಬರುತ್ತದೆ ಎಂದು ಕೊಂಡಿರಲಿಲ್ಲ. ಪ್ರಹ್ಲಾದ್ ಜೋಶಿ ಅವರೇ ಗುಜರಾತ್ ಅಲ್ಲ ಇದು ಕರ್ನಾಟಕ. ಎನ್‌ಕೌಂಟರ್ ಮಾಡುವ ಅವಶ್ಯಕತೆ ಇಲ್ಲ. ಇವರದು ಎನ್‌ಕೌಂಟರ್ ಸಂಸ್ಕೃತಿ ಆಗಿದ್ದು, ಇವರ ಲೀಡರ್ ಅಮಿತ್ ಶಾ. ಇಲ್ಲಿ ಎನ್‌ಕೌಂಟರ್ ಕಾಂಗ್ರೆಸ್ ಇದೆ. ಆ ಸಂಸ್ಕೃತಿ ಇಲ್ಲಿ ಇಲ್ಲ. ಪೊಲೀಸರು ತಮ್ಮ ಕರ್ತವ್ಯ ತಾವು ಮಾಡಿದ್ದಾರೆ ಅಷ್ಟೇ ಎಂದರು.

ಇನ್ನು ಯಾವ ಮಹಾನ್ ನಾಯಕರು ನಮ್ಮಲ್ಲಿ ಇಲ್ಲ. ಸಿ.ಟಿ ರವಿ ಆಣೆ ಪ್ರಮಾಣಕ್ಕೆ ರೆಡಿ ಆಗಲಿ. ಸಿ.ಟಿ ರವಿ ಮಾತನಾಡಿದ್ದು ಇಡೀ ಪರಿಷತ್ ಸದನ ಕೇಳಿದೆ. ತಪ್ಪಾಗಿದೆ ಕ್ಷಮೆ ಕೇಳಿ ಮುಂದುವರೆಯಿರಿ. ಅದು ಬಿಟ್ಟು ನಾನು ಬೆಳಗಾವಿ ಪಾದಯಾತ್ರೆ ಮಾಡುತ್ತೇನೆ. ಆಣೆ ಪ್ರಮಾಣ ಮಾಡುತ್ತೇನೆ, ಅಂದರೆ ಒಳ್ಳೆಯ ಬೆಳವಣಿಗೆ ಅಲ್ಲ. ಆದರೆ ಬಿಜೆಪಿ ಅವರಿಗೆ ಮೊಂಡುತನ ಮಾಡೋದು, ಸುಳ್ಳು ಹೇಳೋದು ಕೆಲಸ ಆಗಿದೆ ಎಂದರು.
ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಅಮಿತ್ ಶಾ ಮಾತನಾಡಿದ್ದು ಸರಿನಾ?. ನಾವು ದೇವರ ಹೆಸರು ಹೇಳಿ ಸ್ವರ್ಗ ಸೇರಲ್ಲ. ಬಿಜೆಪಿಯವರು, ಭೂಮಿ ಮೇಲೆ ಇರುವ ಎಲ್ಲರೂ ದೇವರ ಹೆಸರು ಹೇಳಿ ಸ್ವರ್ಗ ಸೇರಲಿ. ನಾವು ಅಂಬೇಡ್ಕರ್ ಹೆಸರು ಹೇಳಿ ಭೂಮಿ ಮೇಲೆ ಇರುತ್ತೇವೆ. ಈ ದೇಶಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications