Maha Shivratri 2025: ಗೋಕರ್ಣ-ಮುರುಡೇಶ್ವರಕ್ಕೆ ವಿಶೇಷ ಬಸ್, ಇಲ್ಲಿದೆ ವಿವರ
ಹುಬ್ಬಳ್ಳಿ, ಫೆಬ್ರವರಿ 21: ಹುಬ್ಬಳ್ಳಿ ಹಾಗೂ ಧಾರವಾಡದಿಂದ ಮಹಾ ಶಿವರಾತ್ರಿ ಆಚರಣೆಗೆ ಧಾರ್ಮಿಕ ಕ್ಷೇತ್ರಗಳಿಗೆ ಹೊರಟ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಹಾ ಶಿವರಾತ್ರಿ ಆಚರಣೆಗೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಮಹಾ ಶಿವರಾತ್ರಿ ಆಚರಣೆಯ ಪ್ರಯುಕ್ತ ಶಿವರಾತ್ರಿ ಜಾಗರಣೆ, ಶಿವಸ್ತುತಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸುತ್ತಮುತ್ತಲಿನ ಊರುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳುತ್ತಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಈ ಅವಧಿಯಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಮನವಿ ಬಂದಿರುತ್ತದೆ.

ಪ್ರಯಾಣಿಕರ ಬೇಡಿಕೆಯಂತೆ ಉಭಯ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಫೆಬ್ರವರಿ 25ರಂದು ಮಂಗಳವಾರ ರಾತ್ರಿ ಮತ್ತು 26ರಂದು ಬುಧವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ನೇರ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಬಸ್‌ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹೆಚ್ಚಿನ ಮಾಹಿತಿಗಾಗಿ ಗೋಕುಲ ರಸ್ತೆ ಬಸ್ ನಿಲ್ದಾಣಾಧಿಕಾರಿಯವರನ್ನು ( 7760991682 / 9060355688) ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ. ಮಹಾ ಶಿವರಾತ್ರಿ ಆಚರಣೆಗೆ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ತೆರಳಬೇಕೆಂದುಕೊಂಡಿರುವ ಭಕ್ತರು ಈ ವಿಶೇಷ ಬಸ್‌ನ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದು ಸಾರಿಗೆ ಇಲಾಖೆಯ ಮನವಿಯಾಗಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಹಾಗೂ ಗೋಕರ್ಣದಲ್ಲಿ ಮಹಾಶಿವರಾತ್ರಿ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಿಂದಿನ ವರ್ಷದಂತೆ ಈ ವರ್ಷವೂ ಮುರ್ಡೇಶ್ವರ ದೇವಾಲಯವು ನಸುಕಿನ ಜಾವ 4 ಗಂಟೆಗೆ ತೆರೆಯಲು ಆಡಳಿತ ಮಂಡಳಿಯವರಿಗೆ ಸ್ಥಳೀಯ ಆಡಳಿತ ವಿನಂತಿಸಿದ್ದು, ಇದರಿಂದ ದೂರದ ಊರುಗಳಿಂದ ಬಂದ ಭಕ್ತರಿಗೆ ಹಾಗೂ ಪಾದಯಾತ್ರೆಯಲ್ಲಿ ಬಂದ ಭಕ್ತರಿಗೆ ದೇವರ ದರ್ಶನ ಸುಲಭವಾಗಲಿದೆ. ಇನ್ನು ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸ್ಥಳೀಯ ಆಡಳಿತ ಆಯೋಜಿಸಿದೆ.












Click it and Unblock the Notifications