ಹುಬ್ಬಳ್ಳಿ : ಕೆಎಸ್ ಆರ್ ಟಿಸಿಯ ಮೊದಲ ಬಸ್ ಚಾಲಕಿ ಶ್ರೀದೇವಿ
ಹುಬ್ಬಳ್ಳಿ, ಮಾರ್ಚ್ 9: ಆಕೆ ಹೆಸರು ಶ್ರೀದೇವಿ. ವಾಯವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ ಬಸ್ ಚಲಾಯಿಸುತ್ತಿರುವ ಮೊದಲ ಮಹಿಳೆ ಶ್ರೀದೇವಿ. ಹುಬ್ಬಳ್ಳಿ ನಗರದಲ್ಲಿ ಆಕೆ ಬಸ್ ಚಾಲನೆ ಮಾಡುತ್ತಾರೆ. "ಮೊದಲಿಗೆ ನಾನು ಗಾರ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಆ ಮೇಲೆ ವಿಆರ್ ಎಲ್ ಕಂಪನಿ ಸೇರಿದೆ. ನಾನು ಡ್ರೈವಿಂಗ್ ಕಲಿತದ್ದೇ ಅಲ್ಲಿ.
"ಆ ನಂತರ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಅರ್ಜಿ ಹಾಕಿದೆ. ಆಯ್ಕೆಯೂ ಆದೆ. ಕಳೆದ ಐದು ವರ್ಷಗಳಿಂದ ಭಾರಿ ವಾಹನಗಳನ್ನು ಓಡಿಸುತ್ತಿದ್ದೆ" ಎಂದು 32 ವರ್ಷದ ಶ್ರೀದೇವಿ ಹೇಳಿದ್ದಾರೆ. ಯಮನೂರು ಗ್ರಾಮದ ಚಾಲಕರೊಬ್ಬರ ಮಗಳು ಶ್ರೀದೇವಿ, ಎಸ್ಸೆಸ್ಸೆಲ್ಸಿ ನಂತರ ತನ್ನ ಹಳ್ಳಿಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು.

ಆಕೆಯ ತಂದೆಯ ವೃತ್ತಿಯಿಂದ ಪ್ರೇರಣೆಗೊಂಡ ಅವರು, ಚಾಲಕಿ ಆಗುವ ಕನಸು ಕಂಡಿದ್ದರಂತೆ. ಅದನ್ನು ಸಾಕಾರ ಕೂಡ ಮಾಡಿಕೊಂಡಿದ್ದಾರೆ. ಶ್ರೀದೇವಿ ಅವರು ಹುಬ್ಬಳ್ಳಿಯಲ್ಲಿ ಸರಕಾರಿ ಬಸ್ ನ ಚಾಲಕಿ ಆಗಿರುವುದು ಇತರ ಹೆಣ್ಣುಮಕ್ಕಳಿಗೆ ಖಂಡಿತಾ ಸ್ಫೂರ್ತಿ. ಮಹಿಳಾ ದಿನಾಚರಣೆ ಮಾರನೇ ದಿನ ಇಂಥದ್ದೊಂದು ವರದಿ ಪ್ರಕಟವಾಗುತ್ತಿದೆ.












Click it and Unblock the Notifications