ವಾಣಿಜ್ಯ ನಗರಿಯಲ್ಲಿ ಕನ್ನಡಮಯವಾದ ಸಾರಿಗೆ (KSRTC) ಬಸ್
ಹುಬ್ಬಳ್ಳಿ, ನವೆಂಬರ್, 01: ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ನಡುವೆ ಹುಬ್ಬಳ್ಳಿ ನಗರದ ಗ್ರಾಮಾಂತರ ಘಟಕ 1ನೇ ಘಟಕದ ಸಿಬ್ಬಂದಿ ಸಾರಿಗೆ ಬಸ್ ಅನ್ನು ವಿಶಿಷ್ಟವಾಗಿ ಅಲಂಕಾರ ಮಾಡಿದ್ದಾರೆ. ಕನ್ನಡಮಯವಾಗಿ ಮಿಂಚುತ್ತಿದ್ದ ಈ ಬಸನ್ನು ನೋಡಲು ಜನರು ನಾ ಮುಂದು ತಾಮುಂದು ಎಂದು ಮುಗಿಬಿದ್ದಾರೆ.
ಸಾರಿಗೆ ಇಲಾಖೆಯ ನಿರ್ವಾಹಕರು ಮತ್ತು ಚಾಲಕರು ಸೇರಿ ಸ್ವಂತ ಖರ್ಚಿನಿಂದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸನ್ನು 'ಕನ್ನಡಮಯ' ಮಾಡಿದ್ದು ಇನ್ನೊಂದು ವಿಶೇಷ.ಬಸ್ ಮುಂಭಾಗದಲ್ಲಿ ಭುವನೇಶ್ವರಿಯ ಭಾವಚಿತ್ರ ಅಂಟಿಸಿ ಪೂಜೆ ಮಾಡಲಾಗಿತ್ತು. ಬಣ್ಣಬಣ್ಣದ ಬಲೂನ್‌ಗಳಿಂದ ಬಸ್ ಅಲಂಕರಿಸಲಾಗಿತ್ತು. ಬಸ್ ಒಳಗಡೆ ಎಲ್ಲಿ ನೋಡಿದರೂ ಕನ್ನಡಮಯ. ಕನ್ನಡ ನಾಡು, ನುಡಿ ಮತ್ತು ಭಾಷೆಗಾಗಿ ದುಡಿದ ಕವಿಗಳು, ಕಲಾವಿದರು, ವೀರಯೋಧರು, ಕನ್ನಡದ ಮೇರು ನಟರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರ ಫೋಟೋವನ್ನು ಹಾಕಲಾಗಿದೆ. ಈ ಮೂಲಕ ಜನರಿಗೆ ಜಾಗೃತಿ ಸಹ ಮೂಡಿಸಲಾಯಿತು.

ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ವಿಜಯನಗರದ ಅರಸರು, ಕನ್ನಡದ ಸಂತರು ಹೀಗೆ ಪ್ರಮುಖ ಎಲ್ಲ ಮಹನೀಯರ ಚಿತ್ರಗಳನ್ನು ಅಂಟಿಸಲಾಗಿತ್ತು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ದ.ರಾ.ಬೇಂದ್ರೆ, ಕುವೆಂಪು, ವಿ.ಕೃ. ಗೋಕಾಕ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರ ಅವರು ಈ ಪ್ರಶಸ್ತಿಗಳನ್ನು ಪಡೆದ ವರ್ಷ, ಯಾವ ಸಾಧನೆಗೆ ಈ ಗೌರವ ಬಂದಿದೆ ಎನ್ನುವ ಮಾಹಿತಿ ಹೊಂದಿದ್ದ ಪೋಸ್ಟರ್‌ಗಳು ಬಸ್‌ನೊಳಗೆ ರಾರಾಜಿಸುತ್ತಿದ್ದವು.
ಬಸ್ ಚಾಲಕ ನಾಗರಾಜ ಬೊಮ್ಮಣ್ಣವರ, ನಿರ್ವಾಹಕ ಕಲ್ಲಣ್ಣವರ ಹೀಗೆ ಹಲವಾರು ಸಿಬ್ಬಂದಿ ಶೃಂಗಾರಗೊಂಡ ಬಸ್ ಮುಂದೆ ಕನ್ನಡ ಹಾಡುಗಳಿಗೆ ಹೆಜ್ಜೆಯಾಗಿ ಸಂಭ್ರಮಿಸಿದರು. ಹುಬ್ಬಳ್ಳಿ ಸಿಬ್ಬಂದಿ ಈ ಕುರಿತು ಪ್ರತಿಕ್ರಿಯಿಸಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಇದಕ್ಕಿಂತಲೂ ವಿಜೃಂಭಣೆಯಿಂದ ಮಾಡುತ್ತಿದ್ದೆವು. ಈ ಬಾರಿ ಬರ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಬಸ್ ಅಲಂಕಾರ ಮಾಡಲು ನಾವೆಲ್ಲರೂ ಕೈ ಜೋಡಿಸಿದ್ದೇವೆ ಎಂದರು.
ಇನ್ನು ಪ್ರತಿಯೊಬ್ಬರು ಕನ್ನಡ ತಾಯಿ ಸೇವೆ ಮಾಡಬೇಕಾಗಿದೆ. ಆದ್ದರಿಂದ ಹಬ್ಬಗಳು, ನಾಡು, ನುಡಿಯ ದಿನಗಳನ್ನು ಸಂಭ್ರಮದಿಂದ ಆಚರಿಸಿದರೆ ಮನಸ್ಸಿಗೂ ಖುಷಿ ಸಿಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದವು.
ಚಿತ್ರದುರ್ಗದಲ್ಲಿ ಮೊಳಗಿದ ಕನ್ನಡದ ಕಹಳೆ
ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಸಂಭ್ರಮದ ನಡುವೆ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ನೆರವೇರಿಸುವರು. ಇದಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ 'ತಾಯಿ ಭುವನೇಶ್ವರಿ ದೇವಿ' ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಆಕರ್ಷಕ ಸ್ತಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಶಿಕ್ಷಣದ ಶಕ್ತಿ ಸಾರುವ ಶಾಲಾ ಶಿಕ್ಷಣ ಇಲಾಖೆಯ ಸ್ತಬ್ದಚಿತ್ರ, ದೇಶದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಮೂಲಕ ಚಂದ್ರಯಾನ ಸಾಧನೆ ಶಿಕ್ಷಣ ಹೇಗೆ ಇಂಬು ನೀಡಿದೆ ಎಂಬುದನ್ನು ಸಾಬೀತುಪಡಿಸಿತು. ಇದರೊಂದಿಗೆ ಶಾಲಾ ಶಿಕ್ಷಣ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು.
ಪ್ರವಾಸೋದ್ಯಮ ಇಲಾಖೆಯ ದೇಶದ ನಾರಿಯರ ಸಾಧನೆ ಅನಾವರಣಗೊಳಿಸಿದ ನಾರಿಶಕ್ತಿಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ದೇಶದ ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು, ಶರಣೆ ಅಕ್ಕಮಹಾದೇವಿ, ವೀರ ವನಿತೆ ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಬಾಹ್ಯಾಕಾಶ ಯಾತ್ರಿ ಕಲ್ಪನಾ ಚಾವ್ಲಾ, ಒಲಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರ ಭಾವಚಿತ್ರಗಳು ನಾರಶಕ್ತಿ ಸ್ತಬ್ದಚಿತ್ರದಲ್ಲಿ ಕಂಗೊಳಿಸಿದವು. ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಕರ್ಯ ಕಲ್ಪಿಸಿದ ಸರ್ಕಾರದ ಮಹತ್ವಾಕಾಂಕ್ಷೆ ಶಕ್ತಿ ಯೋಜನೆ ಮಹತ್ವವನ್ನು ಸಾರಿಗೆ ಇಲಾಖೆ ಸ್ತಬ್ದಚಿತ್ರ ಗಮನ ಸೆಳೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣ ಘಟಕದ ವತಿಯಿಂದ ನಿರ್ಮಿಸಲಾದ ಸ್ತಬ್ದಚಿತ್ರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಎಚ್ಚರಿಸಿತು. ಬಾಲ್ಯ ವಿವಾಹಕ್ಕೆ ಕಾರಣರಾದರೆ ಕಾನೂನಿ ಪ್ರಕಾರ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಕ್ಕಳ ಹಕ್ಕುಗಳನ್ನು ಗೌರವಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಲು ಸರ್ಕಾರ ತಂದಿರುವ ಯೋಜನೆಗಳ ಮಾಹಿತಿ ನೀಡಿತು.
ಬೆಸ್ಕಾಂನ ಗೃಹಜ್ಯೋತಿ, ಆರೋಗ್ಯ ಇಲಾಖೆಯ ಸ್ತನ್ಯಪಾನ ಮಹತ್ವ ಸಾರುವ ಹಾಗೂ ಅರಣ್ಯ, ಕೃಷಿ, ಅಬಕಾರಿ ಇಲಾಖೆ, ನಗರ ಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ತಬ್ದಚಿತ್ರಗಳು ಸರ್ಕಾರ ಯೋಜನೆಯ ಮಾಹಿತಿ ನೀಡಿದವು. ಪೂರ್ಣಕುಂಭ ಹೊತ್ತ ಮಹಿಳೆಯರು, ಶಾಲೆ ಮಕ್ಕಳು, ಕಹಳೆ, ಡೋಲು ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಸ್ಥಬ್ದಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಾಂಧಿ ವೃತ್ತ, ಎಸ್.ಬಿ.ಎಂ ವೃತ್ತ, ಓಬವ್ವ ವೃತ್ತದ ಮೂಲಕ ಮೆರವಣಿಗೆ ಪೊಲೀಸ್ ಕವಾಯತು ಮೈದಾನ ತಲುಪಿತು.
ಶಿಕ್ಷಣ ಇಲಾಖೆ ಚಂದ್ರಯಾನ, ಸಾರಿಗೆ ಇಲಾಖೆ ಶಕ್ತಿ ಯೋಜನೆ, ಅರಣ ಇಲಾಖೆ ವನ್ಯಜೀವಿ ಸಂರಕ್ಷಣೆ ಮಹತ್ವ ಸಾರಿದ ಸ್ತಬ್ದಚಿತ್ರಗಳು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.












Click it and Unblock the Notifications