ಎರಡನೇ ಲಿಸ್ಟ್ ಅಲ್ಲೂ ಜಗದೀಶ್ ಶೆಟ್ಟರ್ ಹೆಸರಿಲ್ಲ: ಮತ್ತಷ್ಟು ಕಗ್ಗಂಟಾದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಅಭ್ಯರ್ಥಿ ಆಯ್ಕೆ
ಹುಬ್ಬಳ್ಳಿ, ಏಪ್ರಿಲ್ 13: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Elections 2023 ) ಬಿಜೆಪಿ ( BJP ) ತನ್ನ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕಾಂಗ್ರೆಸ್ ( Congress ) ಮುಖಂಡ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರಿಲ್ಲ. ಆರು ಅವಧಿಯ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರು ತಮ್ಮ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ತಮಗೆ ಟಿಕೆಟ್ ನೀಡಲೇಬೇಕೆಂದು ಜಗದೀಶ್ ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಬುಧವಾರ ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನ ಹಾಲಿ ಶಾಸಕ ಜಗದೀಶ್ ಶೆಟ್ಟರ್, ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ಕೇಂದ್ರ ನಾಯಕತ್ವ ಸೂಚಿಸಿದೆ ಎಂದು ಹೇಳಿದ್ದಾರೆ. ಆದರೂ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ನಾಯಕತ್ವಕ್ಕೆ ತಿಳಿಸಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ನಾಯಕತ್ವದ ನಿರ್ಧಾರವು ತಮಗೆ ಸ್ವೀಕಾರಾರ್ಹವಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಈ ನಿರ್ಧಾರವನ್ನು ಪಕ್ಷದ ವರಿಷ್ಠರು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ನಡ್ಡಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಶೆಟ್ಟರ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಗಿದ್ದರು ಎಂದು ತಿಳಿದುಬಂದಿದೆ.
224 ಸದಸ್ಯ ಬಲದ ವಿಧಾನಸಭೆಯ 189 ಸ್ಥಾನಗಳಿಗೆ ಬಿಜೆಪಿ ಮಂಗಳವಾರ ಟಿಕೆಟ್ ಘೋಷಿಸಿದೆ. 52 ಹೊಸ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿಗಳ ಹೋರಾಟವನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಕನಕಪುರದಲ್ಲಿ ಕಂದಾಯ ಸಚಿವ ಆರ್ ಅಶೋಕ ಹಾಗೂ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.
ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20ರವರೆಗೆ ನಡೆಯಲಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬರಲಿದೆ.
ರಘುಪತಿ ಭಟ್ ಕಣ್ಣೀರು
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಉಡುಪಿ ಶಾಸಕ ರಘುಪತಿ ಭಟ್ ಅವರು ಬುಧವಾರ ಪಕ್ಷವು ತಮಗೆ ನೀಡಿದ ಬಿಳ್ಕೋಡುಗೆಯಿಂದ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ, ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿದೆ ಎಂದು ಭಟ್ ಅವರು ಉಡುಪಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಳಲು ತೋಡಿಕೊಂಡಿದ್ದಾರೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೂ ಸಹ ಪಕ್ಷದ ನಿರ್ಧಾರವನ್ನು ತಿಳಿಸಲು ಕರೆ ಮಾಡಿಲ್ಲ. ಮಾಧ್ಯಮಗಳಿಂದಲೇ ಈ ವಿಷಯ ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
'ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಬದಲಾವಣೆಗಳ ಬಗ್ಗೆ ತಿಳಿಸಿದ್ದರು. ಶಾ ನನಗೆ ಕರೆ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಆದರೆ ಕನಿಷ್ಠ ಜಿಲ್ಲಾಧ್ಯಕ್ಷರಾದರೂ ಅದನ್ನು ಮಾಡಬೇಕಿತ್ತು. ನನ್ನ ಜಾತಿಯ ಕಾರಣಕ್ಕಾಗಿ ಟಿಕೆಟ್ ನಿರಾಕರಿಸಿದರೆ ನಾನು ಅದನ್ನು ಒಪ್ಪುವುದಿಲ್ಲ' ಅವರು ತಿಳಿಸಿದ್ದಾರೆ.
ದಣಿವರಿಯದೆ ದುಡಿಯುವ ಮುಖಂಡರು ಬಿಜೆಪಿಗೆ ಬೇಕಾಗಿಲ್ಲ ಎಂದು ಭಟ್ ಹೇಳಿದ್ದಾರೆ. ಕಷ್ಟಕಾಲದಲ್ಲೂ ಪಕ್ಷಕ್ಕಾಗಿ ದುಡಿದಿದ್ದು, ಸಿಕ್ಕ ಅವಕಾಶಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿ ಯಶಪಾಲ್ ಸುವರ್ಣರನ್ನು ನನ್ನ ಹುಡುಗ ಎಂದು ತಿಳಿಸಿದ ಭಟ್, ಪಕ್ಷದಲ್ಲಿ ಸುವರ್ಣ ಅವರ ಬೆಳವಣಿಗೆಗೆ ನಾನು ಯಾವಾಗಲೂ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications