ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್‌ ಬಿಸಿ ಹೇಗಿದೆ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ 30 : ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು, ರಾಮನಗರ, ತುಮಕೂರು ಮುಂತಾದ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲ ರೈತ ಮುಖಂಡರು ಶನಿವಾರ ಬೆಳಗ್ಗೆ ಹುಬ್ಬಳ್ಳಿಯ ಕಿತ್ತೂರ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದರು. ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿರುವ ಕಾರಣ, ಬಂಧನ ಭೀತಿಯ ಹಿನ್ನಲೆಯಲ್ಲಿ ಹೆಚ್ಚಿನ ಹೋರಾಟಗಾರರು ಪ್ರತಿಭಟನೆಗೆ ಬಂದಿಲ್ಲ. [ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]

hibballi
Photo Credit:

ಗುರುವಾರದಿಂದ ಹಲವಾರು ಹೋರಾಟಗಾರರನ್ನು ಪೊಲೀಸರು ಬಂಧಿಸುತ್ತಿರುವುದರಿಂದ ಕೆಲ ಕನ್ನಡಪರ ಸಂಘಟನೆಗಳವರು ಮಾತ್ರ ಪ್ರತಿಭಟನೆಗೆ ಆಗಮಿಸುತ್ತಿದ್ದಾರೆ. ಆಗಸ್ಟ್ 3 ಅಥವಾ 5 ರಿಂದ ಹುಬ್ಬಳ್ಳಿ ತಹಶೀಲ್ದಾರ ಕಚೇರಿ ಎದುರು ಧರಣಿ ಕುಳಿತುಕೊಳ್ಳಲು ಚಿಂತಿಸಿರುವ ರೈತರು ಇಂದಿನ ಬಂದ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿಲ್ಲ.[ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?]

ನಗರದ ವರೂರು ಬಳಿ ಇರುವ ವಿಆರ್‌ಎಲ್ ಸಂಸ್ಥೆಗೆ ಬಂದ್ ಬಿಸಿ ತಟ್ಟಿದೆ. ವಿಜಯ ಸಂಕೇಶ್ವರ ಅವರ ಒಡೆತನದ ವಿಆರ್‌ಎಲ್ ಸಂಸ್ಥೆಗೆ ಗುರುವಾರ ಪ್ರತಿಭಟನಾಕಾರರು ನುಗ್ಗಿ ಸುಮಾರು 1,500 ಕ್ಕೂ ಹೆಚ್ಚು ನೌಕರರನ್ನು ಹೊರಗಡೆ ಕಳಿಸಿದ್ದರು. ಅಲ್ಲದೇ ಸುಮಾರು 10 ಕ್ಕೂ ಹೆಚ್ಚು ಕಂಪ್ಯೂಟರ್ ಧ್ವಂಸ ಮಾಡಿದ್ದರು. ಶನಿವಾರ ಕೂಡ ವಿಆರ್ ಎಲ್ ಸಂಸ್ಥೆ ಕಾರ್ಯ ನಿರ್ವಹಿಸಿದರೆ ನುಗ್ಗಿ ಬಂದ್ ಮಾಡಿಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.

ಶುಕ್ರವಾರ ನವಲಗುಂದ, ನರಗುಂದ ಭಾಗದ ಹಲವಾರು ಹಳ್ಳಿಗಳಲ್ಲಿನ ರೈತರನ್ನು ಪೊಲೀಸರು ಬಂಧಿಸಿದ್ದಾರೆ, ಆದ್ದರಿಂದ, ಹೋರಾಟದ ಬಿರುಸು ಕಡಿಮೆಯಾಗಿದೆ. ಆದರೆ, ಸ್ವಯಂ ಪ್ರೇರಿತವಾಗಿ ಬಸ್ ಮತ್ತು ಆಟೋಗಳ ಸಂಚಾರವನ್ನು ಸ್ಥಗಿತಗೊಂಡಿವೆ. ಹುಬ್ಬಳ್ಳಿಯಿಂದ ರೈಲುಗಳು ಸಂಚಾರ ನಡೆಸುತ್ತಿಲ್ಲ.

ಬಂದ್ ಕರೆ ಹಿನ್ನಲೆಯಲ್ಲಿ ಜನರು ಕೂಡ ನಗರಕ್ಕೆ ಆಗಮಿಸಿಲ್ಲ. 'ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸುವ ಯಾವ ಹೋರಾಟಗಾರರನ್ನು ಬಂಧಿಸುವುದಿಲ್ಲ. ಅಹಿತಕರ ಘಟನೆ ನಡೆದರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದಾರೆ' ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದ್ದಾರೆ.

ಕನ್ನಡ ಪರ ಸಂಘಟನೆಗಳು ಕರೆ ಕರ್ನಾಟಕ ಬಂದ್ ಗೆ ರಾಜಕೀಯ ಪಕ್ಷಗಳ ಯಾವುದೇ ಕಾರ್ಯಕರ್ತರು ಭಾಗವಹಿಸಿಲ್ಲ. ಹುಬ್ಬಳ್ಳಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷವೇನಾದರೂ ಪ್ರತಿಭಟನೆಗೆ ಕರೆ ನೀಡಿದರೆ ಕ್ಷಣಾರ್ಧಲ್ಲಿ ಬರುತ್ತಿದ್ದ ಪಕ್ಷದ ಕಾರ್ಯಕರ್ತರು ಶನಿವಾರದ ಬಂದ್‌ಗೆ ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The response to the Karnataka Bandh call was mixed in Hubballi city. The normal life in the city remained unaffected in majority of the localities.
Please Wait while comments are loading...