ಕಲಘಟಗಿ: ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ ಸುರಶೆಟ್ಟಿಕೊಪ್ಪ ಗ್ರಾಮಸ್ಥರು
ಕಲಘಟಗಿ, ಜೂನ್, 10: ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಇದೀಗ ಮುಂಗಾರು ಕೂಡ ವಿಳಂಬವಾದ ಹಿನ್ನೆಲೆ ಅನ್ನದಾತರು ಬೇಸಿಗೆ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇನ್ನೂ ಕೆಲವೆಡೆ ರೈತರು ಮಳೆಗಾಗಿ ವಿಶೇಷ ಪೂಜೆಗಳನ್ನು ಮಾಡುತ್ತಲೇ ಇದ್ದಾರೆ. ಹಾಗೆಯೇ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದ ಘಟನೆಯೂ ನಡೆದಿದೆ.
ಜೂನ್ ತಿಂಗಳು ಬಂದರೆ ಸಾಕು ರೈತರು ಮಳೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ ಇದೀಗ ಒಂದು ವಾರ ಕಳೆದರೂ ಮಳೆ ಮಾತ್ರ ಇನ್ನು ಪ್ರವೇಶ ಮಾಡಿಲ್ಲ. ಆದ್ದರಿಂದ ಹಲವೆಡೆ ರೈತರು ದೇವರ ಮೊರೆಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕಲಘಟಗಿಯಲ್ಲಿ ರೈತರು ಮಳೆ ಬರಲಿ ಅಂತಾ ಕೈ ಮುಗಿದು ಕಪ್ಪೆಗಳಿಗೆ ಮದುವೆ ಮಾಡಿದ್ದು, ಇದು ವಿಶೇಷ ಆಚರಣೆಗೆ ಸಾಕ್ಷಿಯಾಗಿದೆ.

ಮಳೆ ಆಗಿಲ್ಲ ಅಂದರೆ ನಮ್ಮ ಪೂರ್ವಜರು ಕಪ್ಪೆಗಳು, ಕೋತಿಗಳು, ಕೋಳಿಗಳಿಗೂ ಮದುವೆ ಮಾಡುತ್ತಿದ್ದರು. ಇದೇ ನಂಬಿಕೆಯಲ್ಲಿ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಜನರು ಅರಿಶಿನಶಾಸ್ತ್ರ, ಹಂದರ ಶಾಸ್ತ್ರ, ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನು ಮೆರವಣಿಗೆ ಮಾಡುವ ಮೂಲಕ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದ್ದಾರೆ.
ಶುಕ್ರವಾರ (ಜೂನ್ 10) ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರೆಲ್ಲರೂ ಉಡಿ ತುಂಬಿಕೊಂಡು ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೇರೆದು, ಹಾಸಕ್ಕಿ ಹಾಕಿ, ತಾಳಿ ಕಟ್ಟಿಸಿ ಮದುವೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಬಂದ ಭಕ್ತರಿಗೆ ಅನ್ನ ಪ್ರಸಾದವನ್ನು ಏರ್ಪಡಿಸಿ ಮಳೆರಾಯ ಬೇಗ ಬಾ ಅಂತಾ ವಿಶೇಷ ನಮನ ಸಲ್ಲಿಸಿದರು.
ಪ್ರತಿ ವರ್ಷ ಮೇ ತಿಂಗಳ ಕೊನೆ ವಾರ ಬಂದರೆ ಸಾಕು ರೈತರು ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರುತ್ತಿದ್ದರು. ಆದರೆ ಈ ವರ್ಷ ಜೂನ್ ತಿಂಗಳ ಹೊಸ್ತಿಲಲ್ಲಿ ಮೃಗಶಿರ ಮಳೆ ಆರಂಭ ಆದರೂ, ಮಳೆರಾಯ ಬಾರದೆ ಇರುವುದರಿಂದ ಕಂಗಲಾದ ರೈತರು ಮೋಡದತ್ತ ಮುಖ ಮಾಡಿ ಕುಳಿತಿದ್ದಾರೆ.
ಕೈಕೊಟ್ಟ ಮುಂಗಾರು ಪೂರ್ವ ಮಳೆ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದು, ಬೇಸಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂಗಾರು ಮಳೆ ವಿಳಂಬ ಆದರೆ ಕೃಷಿ ಬೆಳೆಗಳು ಒಣಗಿ ಹೋಗಲಿದ್ದು, ಇದರಿಂದ ಜಿಲ್ಲೆಯ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ.
ಜಿಲ್ಲೆಯಲ್ಲಿ 4,98,244 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 2,60,901 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಏಪ್ರಿಲ್ ತಿಂಗಳು 46.6 ಮಿ.ಮೀ. ವಾಡಿಕೆ ಮಳೆಯಾಗಿದ್ದು, 26.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಹೀಗೆ ಜಿಲ್ಲೆಯಲ್ಲಿ 43.8ರಷ್ಟು ಮಳೆ ಕೊರತೆ ಎದುರಾಗಿದೆ. ಮೇ ತಿಂಗಳಿನಲ್ಲಿ 99.9 ಮಿ.ಮೀ. ವಾಡಿಕೆ ಮಳೆಯಾಗಿದ್ದು, 137.3 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆದರೆ ಈ ಮಳೆ ಒಂದೆರೆಡು ದಿನಗಳಲ್ಲಿ ಆಗಿರುವುದರಿಂದ ರೈತರ ಬೆಳೆಗೆ ಅಷ್ಟೇನೋ ಪ್ರಯೋಜನ ಆಗಿಲ್ಲ.
ಪ್ರಸ್ತುತ ಬೇಸಿಗೆ ಬೆಳೆಗಳಾದ ಭತ್ತ 17,848 ಹೆಕ್ಟೇರ್, 2,885 ಹೆಕ್ಟೇರ್ ರಾಗಿ, 872 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳು ಸೇರಿ ಒಟ್ಟು 25,897 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದೆ. ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಇನ್ನು ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ 43,495 ಹೆಕ್ಟೇರ್ ಕಬ್ಬಿನ ಬೆಳೆ ಕಟಾವಿಗೆ ಬಂದಿದ್ದು, ಇದಕ್ಕೆ 2 ರಿಂದ 3 ಬಾರಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕಿದೆ.
17,600 ಹೆಕ್ಟೇರ್ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, 15,369 ಹೆಕ್ಟೇರ್‌ನಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಇದರೊಂದಿಗೆ ಶೇ.87.33ರಷ್ಟು ಗುರಿ ಸಾಧಿಸಲಾಗಿದೆ. ಬಿತ್ತನೆ ಆಗಿರುವ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ (8060 ಹೆಕ್ಟೇರ್), ಎಳ್ಳು (3213 ಹೆಕ್ಟೇರ್), ಮುಸಿಕನ ಜೋಳ (506 ಹೆಕ್ಟೇರ್) ಹಾಗೂ ಇತರೆ ದ್ವಿದಳ ಧಾನ್ಯಗಳು ಸೇರಿವೆ.
ಇನ್ನು ಜುಲೈ ಮಾಹೆಯಲ್ಲಿ ಮುಂಗಾರು ಬೆಳೆಗಳಾದ ಭತ್ತ, ರಾಗಿ, ಕಬ್ಬು, ದ್ವಿದಳಧಾನ್ಯ, ಎಣ್ಣೆಕಾಳು ಹಾಗೂ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಪುಸ್ತುತ ಜಿಲ್ಲೆಯಾದ್ಯಂತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ತೇವಾಂಶದ ಕೊರತೆಯಿಂದ ಪೂರ್ವ ಹಂಗಾಮಿನಲ್ಲಿ ಮಳೆಯಾಶ್ರಿತದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಆದರೆ ಇದೀಗ ಮಳೆ ನೀರಿನ ಅವಶ್ಯಕತೆ ಎದುರಾಗಿದೆ.
ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಪೂರ್ವ ಮುಂಗಾರು ಬೆಳೆಗಳು ಕೈ ಸೇರದೆ ಹೋಗಬಹುದು. ಒಂದು ವೇಳೆ ಇನ್ನೂ ಮಳೆ ಬಾರದೇ ಹೋದರೆ ರೈತರು ಸಾಲ-ಸೋಲ ಮಾಡಿ ಬೆಳೆದ ಬೆಳೆಗಳಿಂದ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಹಾಗೆಯೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ.
2023-24ನೇ ಸಾಲಿಗೆ ಒಟ್ಟು 17,325 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ಅಗತ್ಯವಿದ್ದು, ಪ್ರಸ್ತುತ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಉದ್ದು ಬೆಳೆಗಳ ಒಟ್ಟು 169 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಪಡೆಯಲಾಗಿದ್ದು, ಈವರೆಗೂ 150.80 ಕ್ವಿಂಟಾಲ್ ವಿತರಣೆಯಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ರಾಗಿ ಮತ್ತು ಮುಸುಕಿನ ಜೋಳ ಬೆಳೆಗಳ ಬಿತ್ತನೆ ಬೀಜವನ್ನು ಕರ್ನಾಟಕ ರಾಜ್ಯ ಬೀಜ ನಿಮಗ (7950 ಕ್ವಿಂಟಾಲ್), ರಾಷ್ಟ್ರೀಯ ಬೀಜ ನಿಗಮ (2500 ಕ್ವಿಂಟಾಲ್), ವಿ.ಸಿ.ಫಾರಂ ಗೋದಾಮುಗಳಲ್ಲಿ 1940 ಕ್ವಿಂಟಾಲ್ ದಾಸ್ತಾನು ಇರಿಸಲಾಗಿದೆ. ರೈತರ ಬೇಡಿಕೆಗನುಗುಣವಾಗಿ ಜೂನ್, ಜುಲೈ ತಿಂಗಳಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚುವರಿಯಾಗಿ ಪ್ಯಾಕ್ಸ್‌ಗಳಲ್ಲಿ ಸಹಾಯಧನ ವಿತರಿಸಲು ಕ್ರಮವಹಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.












Click it and Unblock the Notifications