ಹುಬ್ಬಳ್ಳಿ-ಮಂಗಳೂರು ನಡುವೆ ಇಂಡಿಗೋ ವಿಮಾನ ಸೇವೆ
ಹುಬ್ಬಳ್ಳಿ, ಮಾರ್ಚ್ 01 : ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸಲು ವಿಮಾನ ಸೇವೆ ಆರಂಭವಾಗುತ್ತಿದೆ. ಹುಬ್ಬಳ್ಳಿ-ಮಂಗಳೂರು ನಡುವೆ ನೇರ ವಿಮಾನ ಸಂಪರ್ಕವನ್ನು ಇಂಡಿಗೋ ಸಂಸ್ಥೆ ಕಲ್ಪಿಸಲಿದೆ.
ಮಾರ್ಚ್ 29ರಿಂದ ಹುಬ್ಬಳ್ಳಿ-ಮಂಗಳೂರು ನಡುವೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಬುಕ್ಕಿಂಗ್ ಸಹ ಆರಂಭವಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ಹೊರಡುವ ವಿಮಾನ ಸಂಜೆ 6.25ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಧಾರವಾಡ ಸಂಸದ ಮತ್ತು ಕೇಂದ್ರ ಸಚಿವರ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. "ಬಹು ದಿನಗಳಿಂದ ನಾವು ಬಂದರು ನಗರಿ ಮಂಗಳೂರಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ನಡೆಸಿದ ಪ್ರಯತ್ನ ಈಗ ಫಲಪ್ರದವಾಗಿದೆ" ಎಂದು ಹೇಳಿದ್ದಾರೆ.

"ಇಂಡಿಗೋ ಸಂಸ್ಥೆ ವಿಮಾನ ಯಾನ ಪ್ರಾರಂಭಿಸಲಿದ್ದು ಈ ಕಾರ್ಯಕ್ಕೆ ಸಹಕರಿಸಿದ ವಿಮಾನಯಾನ ಸಚಿವರಿಗೆ ಹಾಗೂ ಇಂಡಿಗೋ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ತಮ್ಮೆಲ್ಲರಿಗೂ ಕೋರುತ್ತೇನೆ" ಎಂದು ಪೋಸ್ಟ್ ಹಾಕಿದ್ದಾರೆ.
ಉಭಯ ನಗರಗಳ ಸಂಚಾರ ನಡೆಸಲು ಬಯಸುವ ಜನರು ಹೆಚ್ಚಿನ ಮಾಹಿತಿಗಾಗಿ
https://www.goindigo.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications