Hubli to Pune Flight : ಮಾರ್ಚ್ 13ರಂದು ಹುಬ್ಬಳ್ಳಿ-ಪುಣೆ ನಡುವೆ ದೈನಂದಿನನ ವಿಮಾನ ಕಾರ್ಯಾಚರಣೆ ಆರಂಭ
ಹುಬ್ಬಳ್ಳಿಯಿಂದ ಪುಣೆಗೆ ದೈನಂದಿನ ಇಂಡಿಗೋ ವಿಮಾನವೂ ಮಾರ್ಚ್ 13 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಮಾರ್ಚ್, 01: ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ಇಂಡಿಗೋ ವಿಮಾನವು ಮಾರ್ಚ್ 13 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿದ ನಂತರ, ಇಲ್ಲಿನ ನಿವಾಸಿಗಳು ದೇಶದ ಇತರ ನಗರಗಳಿಗೆ ಹೆಚ್ಚಿನ ವಿಮಾನಗಳನ್ನು ಬಿಡುವುದಾಗಿ ಕೋರಿದ್ದಾರೆ. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾವ ಮಾರ್ಗಗಳಲ್ಲಿ ವಿಮಾನ ಹಾರಾಟ?
ಇಂಡಿಗೋ ಮತ್ತು ಸ್ಟಾರ್ ಏರ್ ಹುಬ್ಬಳ್ಳಿಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ಮೈಸೂರು, ಮಂಗಳೂರು ಮತ್ತು ನವದೆಹಲಿಗೆ ವಿಮಾನಗಳ ಹಾರಾಟ ನಡೆಸುತ್ತದೆ. ಪುಣೆಗೆ ಈಗ ವಾರಕ್ಕೆ ಎರಡು ಬಾರಿ ವಿಮಾನ ಹಾರಾಟ ನಡೆಸಲಿದೆ. ಶನಿವಾರ ಮತ್ತು ಭಾನುವಾರದಂದು ಈ ಸೇವೆ ಇರಲಿದೆ. ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ಪ್ರತಿನಿತ್ಯ ವಿಮಾನಗಳ ಹಾರಾಟವನ್ನು ಪ್ರಾರಂಭಿಸಲು ನಿರ್ಧಾರ ಮಾಡಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ನಾನು ಈಗಾಗಲೇ ಇಂಡಿಗೋ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಮತ್ತು ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪುಣೆಗೆ ದೈನಂದಿನ ವಿಮಾನವನ್ನು ನಿರ್ವಹಿಸಲು ಹಸಿರು ನಿಶಾನೆ ತೋರಿಸಿದ್ದಾರೆ. ಫೆಬ್ರವರಿ 4 ರಿಂದ ಶನಿವಾರ ಮತ್ತು ಭಾನುವಾರದಂದು ವಾರಕ್ಕೆ ಎರಡು ಬಾರಿ ವಿಮಾನ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಲ್ಲಿ ಒಂದಾದ ಪುಣೆಗೆ ಇದೇ ಮಾರ್ಚ್ 13ರಿಂದ ಪ್ರತಿದಿನ ಕಾರ್ಯಾಚರಣೆ ಆರಂಭವಾಗಲಿದೆ ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ ಮಾತನಾಡಿ, ಇಂಡಿಗೋ ತನ್ನ ದೈನಂದಿನ ವಿಮಾನವನ್ನು ಪುಣೆಗೆ ಮಾರ್ಚ್ 13ರಿಂದ ಹಾರಾಟ ನಡೆಸಲಿದೆ. ಇಂಡಿಗೋ ಸಲ್ಲಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ನಾವು ನಮ್ಮ ಸ್ಲಾಟ್‌ಗಳನ್ನು ತೆರವುಗೊಳಿಸಿದ್ದೇವೆ. ಹಾಗೆಯೇ ಅಹಮದಾಬಾದ್, ಗೋವಾ, ಕೊಚ್ಚಿನ್, ಜೋಧ್‌ಪುರ ಮತ್ತು ಇತರ ನಗರಗಳಿಗೆ ವಿಮಾನಗಳು ಹಾರಾಟ ನಡೆಸುವಂತೆ ಪ್ರಯತ್ನಿಸುತ್ತಿದ್ದು, ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಈ ಉದ್ದೇಶಿತ ಪುಣೆ ವಿಮಾನವು ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications