ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಹುಂಡಿ ಎಣಿಕೆ: 25.80 ಲಕ್ಷ ರೂಪಾಯಿ ಕಾಣಿಕೆ ಹಣ ಸಂಗ್ರಹ
ಹುಬ್ಬಳ್ಳಿ, ಜುಲೈ, 21: ನಗರದ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ ಒಟ್ಟು ₹25,80,122 ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್‌ಬಿಐ ಸಿದ್ಧಾರೂಢನಗರ ಶಾಖೆಯ ವ್ಯವಸ್ಥಾಪಕ, ಬ್ಯಾಂಕ್ ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಮಠದ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಸಂಗ್ರಹವಾದ ಹಣದ ಎಣಿಕೆ ಕಾರ್ಯವನ್ನು ಆರಂಭಿಸಲಾಯಿತು. ಭಕ್ತರು ದೇಣಿಗೆ ನೀಡಿದ್ದ ನಗದು ಜೊತೆಗೆ ಕಾಣಿಕೆ ಪಟ್ಟಿಗೆಯಲ್ಲಿ ₹72,784 ಮೌಲ್ಯದ ಚಿನ್ನ, ಬೆಳ್ಳಿಯ ಸಾಮಗ್ರಿಗಳ ಸಂಗ್ರಹವಾಗಿತ್ತು.

ಜೂನ್ 21ರಿಂದ ಜುಲೈ 19ರವರೆಗೆ ಒಟ್ಟು 28 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಇದಾಗಿದೆ ಎಂದು ಮಠದ ಟ್ರಸ್ಟ್ ಕಮಿಟಿಯ ಪ್ರಮುಖರಾದ ಉದಯಕುಮಾರ ಡಿ.ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳ ಎನ್.ಪಾಠಕ ತಿಳಿಸಿದ್ದಾರೆ.
ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ಮಠದ ಧರ್ಮದರ್ಶಿ ವಿನಾಯಕ ಎ.ಘೋಡ್ಕೆ, ವಸಂತ ವೈ ಸಾಲಗಟ್ಟಿ, ವಿ.ವಿ.ಮಲ್ಲಾಪೂರ ಸೇರಿದಂತೆ ಮಠದ ಪ್ರಮುಖರು, ಸಿಬ್ಬಂದಿ ಭಾಗವಹಿಸಿದ್ದರು.
ಬಿಳಿಗಿರಿ ರಂಗನಾಥ ಸ್ವಾಮಿಗೆ ಬಗೆಬಗೆಯ ಪತ್ರ
ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಹಾಗೂ ಚಿಕ್ಕ ತಿರುಪತಿ ಎಂದೇ ಹೆಸರಾದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಯದ ಹುಂಡಿ ಎಣಿಕೆ ಬುಧವಾರ ನಡೆದಿದ್ದು ಭಕ್ತರು ಪತ್ರಗಳ ಮೂಲಕ ಭಗವಂತನಿಗೆ ಮೊರೆ ಇಟ್ಟಿದ್ದಾರೆ. ಕಳೆದ ಬುಧವಾರ ನಡೆದ ಹುಂಡಿ ಎಣಿಕೆ ವೇಳೆ 4-5 ಮಂದಿ ಭಕ್ತರು ಹಣದ ಜೊತೆಗೆ ಪತ್ರಗಳನ್ನು ಬಿಳಿಗಿರಿರಂಗನಾಥ ಸ್ವಾಮಿಗೆ ಅರ್ಪಣೆ ಮಾಡಿದ್ದಾರೆ. ಆಸ್ತಿ, ಧೈರ್ಯ, ಆರೋಗ್ಯ ಭಾಗ್ಯ, ಮಗನಿಗೆ ಒಳ್ಳೆಯ ಬುದ್ಧಿ ಕೊಡುವಂತೆ ತರಹೇವಾರಿ ಬೇಡಿಕೆಗಳನ್ನು ಭಕ್ತರು ಭಗವಂತನ ಮುಂದೆ ಇಟ್ಟಿದ್ದಾರೆ.
ಭಗವಂತನಿಗೆ ಅರ್ಪಿಸಿದ ಭಕ್ತರ ಪತ್ರಗಳಲ್ಲಿ ಏನಿದೆ..? ಭಕ್ತರೊಬ್ಬರು ಚೀಟಿಯೊಂದನ್ನು ಹುಂಡಿಗೆ ಹಾಕಿದ್ದು ಆಸ್ತಿ ವ್ಯಾಜ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಕ್ಕ-ತಂಗಿಯರಿಗೆ ಆಸ್ತಿ ಸಿಗದಿರಲಿ- ಗಂಡು ಮಕ್ಕಳ ಪರವಾಗಿ ಕೋರ್ಟ್ ತೀರ್ಪು ಬರಲಿ, ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಆಸ್ತಿ ಆಗಬಾರದು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು, ಮತ್ತೊಂದು ಪತ್ರದಲ್ಲಿ ಯುವಕನೋರ್ವ ಸಮಾಜದಲ್ಲಿ ಮುಖಂಡನಾಗಿ ಗುರುತಿಸಿಕೊಳ್ಳುವ ಆಸೆಯನ್ನು ಹೊರಹಾಕಿ ಗಮನ ಸೆಳೆದಿದ್ದಾನೆ.
ತನಗೆ ಮಾತನಾಡುವ ಧೈರ್ಯ ಕೊಡು, ನಮ್ಮ ಏರಿಯಾದಲ್ಲಿ ಗುರುತಿಸಿಕೊಳ್ಳುತ್ತೇನೆ. ಹಣ ಸಂಪಾದನೆ ಮಾಡುತ್ತೇನೆ. ಇಡೀ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿದ್ದು, ಏರಿಯಾದಲ್ಲಿ ಎಲ್ಲರ ಮುಂದೆ ಮಾತನಾಡಲು ಧೈರ್ಯ ಕೊಡು ಎಂದು ದೇವರ ಬಳಿ ತನ್ನ ಆಸೆ ಹೊರಹಾಕಿದ್ದಾನೆ. ಮತ್ತೊಂದು ಪತ್ರದಲ್ಲಿ ತಾಯಿಯೊಬ್ಬರು ಬರೆದಿದ್ದು ಮಗನಿಗೆ ಒಳ್ಳೆಯ ಬುದ್ಧಿ ಕೊಡಲಿ, ತನ್ನನ್ನು ಬೈಯ್ಯದಿರಲಿ, ಹಿಂದೆ ಮಾಡಿದ್ದ ತಪ್ಪನ್ನು ತಾನು ಮಾಡುವುದಿಲ್ಲ. ಆರೋಗ್ಯ ಭಾಗ್ಯ ಕೊಡಲಿ ಎಂದು ಎರಡು ಪುಟಗಳ ದೀರ್ಘ ಪತ್ರ ಬರೆದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.












Click it and Unblock the Notifications