Gruha Lakshmi Scheme: ಗೃಹಲಕ್ಷ್ಮೀ ಯೋಜನೆ ರಾಷ್ಟ್ರಕ್ಕೆ ಮಾದರಿ: ಸಲೀಂ ಅಹ್ಮದ್
ಧಾರವಾಡ, ಆಗಸ್ಟ್, 30: ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೊಸ ಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಐತಿಹಾಸಿಕ ಯೋಜನೆಗಳು ರಾಷ್ಟ್ರದ ಗಮನ ಸೆಳೆದಿವೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದು ಸಲೀಂ ಅಹ್ಮದ್ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸಂಯುಕ್ತವಾಗಿ ಹೆಬ್ಬಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ. ಚುನಾವಣಾ ಪೂರ್ವ ಮತದಾರರಿಗೆ ನೀಡದ್ದ 5 ಭರವಸೆಗಳ ಪೈಕಿ ನಾಲ್ಕು ಘೋಷಣೆಗಳನ್ನು ಈಗಾಗಲೇ ಈಡೇರಿಸಿದೆ. ಮತ್ತು ಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ 5ನೇ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಧಾರವಾಡ ಜಿಲ್ಲೆಯ 3,39,305 ಫಲಾನುಭವಿಗಳಿದ್ದು, ಈ ಪೈಕಿ ಶೇಕಡಾ 86ರಷ್ಟು ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿತರಾಗಿದ್ದಾರೆ. ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರವಾಗಿರುವ ಆಡಳಿತವನ್ನು ನೀಡುತ್ತೆವೆ ಎಂದು ಹೇಳಿದರು.
ಹೆಬ್ಬಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಪ್ಪ ಮೊರಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಧಾರವಾಡ ತಹಶೀಲ್ದಾರ್ ದೊಡ್ಡಪ್ಪ ಹೂಗಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲವ್ವಾ ಸಾಲಿ, ಗ್ರಾಮ ಪಂಚಾಯತ್ ಸದಸ್ಯರು, ಯೋಜನಾ ಫಲಾನುಭವಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.
ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?
ಹಾಗೆಯೇ ಮೈಸೂರಿನಲ್ಲಿ ನಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಹೇಳಿದ್ದ 5 ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ದೇಶದ ಎಲ್ಲೂ ಇಷ್ಟು ದೊಡ್ಡ ಪ್ರಮಾಣದ ಗ್ಯಾರಂಟಿ ಜಾರಿಗೊಂಡಿಲ್ಲ. ಬೇರೆ ರಾಜ್ಯದವರು ಕರ್ನಾಟಕವನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಇಡೀ ಭಾರತವೇ ಇದನ್ನು ಒಪ್ಪಿಕೊಂಡಿದೆ. ಆದರೆ ಮೋದಿ, ಶಾ ಇದನ್ನು ಟೀಕಿಸಿದ್ದರು. ಇದರಿಂದ ದೇಶ ದಿವಾಳಿ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ ಎಂದಿದ್ದರು. ಗುಪ್ತಚರ ದಳ ಕಾಂಗ್ರೆಸ್ ಸಾಧನೆ ಹೇಳಿದರೆ ಮೋದಿ ಕಣ್ತೆರೆಯಬಹುದು. ಆದರೆ ಮೋದಿ ಬೇರೆಯವರ ಕೆಲಸ ಒಪ್ಪುವುದಿಲ್ಲ. ತಾವು ಮಾಡಿದ್ದೇ ಕೆಲಸ ಎಂಬ ಮನೋಭಾವ ಅವರಿಗಿದೆ.
ಅನೇಕ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ. ಅನೇಕ ಸಂಸ್ಥೆಗಳನ್ನು ನಾವೇ ಕಟ್ಟಿದ್ದು. ಏರ್ಪೋರ್ಟ್ ಮಾಡಿದ್ದು ನಾವೇ. ಆದರೆ ಶಾ ಎಲ್ಲಾನಾವೇ ಮಾಡಿದ್ದು ಎನ್ನುತ್ತಾರೆ. ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬ ವರದಿ ಬೇಕಾದರೆ ಕೊಡುತ್ತೇವೆ. ಕಾಂಗ್ರೆಸ್ ಎಲ್ಲಾ ಪ್ರಧಾನಿಗಳು ಜನಪರ ಕೆಲಸ ಮಾಡಿದ್ದಾರೆ. ಅಕ್ಷರ ಕಲಿತವರು ಶೇಕಡಾ 18ರಷ್ಟು ಇತ್ತು, ಆದರೆ ನಂತರ ಶೇಕಡಾ 74ರಷ್ಟು ಆಯಿತು 2014ರಲ್ಲಿ. ಇದು ಕೆಲಸ ಅಲ್ವಾ? ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಿದ್ದು ಕಾಂಗ್ರೆಸ್. ಬಡವರು ರೈತರು ಹಿಂದುಳಿದವರು ಎಸ್‌ಸಿ, ಎಸ್‌ಟಿ ಅವರಿಗೆ ನಾವು ಸಾಕಷ್ಟು ಕೊಡುಗೆ ನೀಡಿದ್ದೇವೆ. ಸಂವಿಧಾನ ಪ್ರಜಾಪ್ರಭುತ್ವ ಉಳಿಸೋಣ ಎಂದರು.












Click it and Unblock the Notifications