ಹುಬ್ಬಳ್ಳಿ DCP ವರ್ಗಾವಣೆ ರದ್ದು ಕೋರಿ ಗೃಹ ಸಚಿವರ ಕಾರಿಗೆ ತಡೆ: ಆಗಿದ್ದೇನು?
ಹುಬ್ಬಳ್ಳಿ, ಮೇ 20: ಲಾ ಆಂಡ್ ಆರ್ಡರ್ ಕಾರಣ ನೀಡಿ ಮಾಡಿರುವ ಡಿಸಿಪಿ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರ ಕಾರನ್ನು ತಡೆದು ನಿಲ್ಲಿಸಿದ ಘಟನೆ ಸೋಮವಾರ ನಡೆಯಿತು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಕೊಲೆ ಇನ್ನಿತರ ಅಪರಾಧ ಕೃತ್ಯಗಳು ನಡೆದಿವೆ. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಜನರು, ವಿಪಕ್ಷಗಳು ಪ್ರಶ್ನೆ ಎತ್ತಿವೆ. ಇದರ ಬೆನ್ನಲ್ಲೆ ಸೋಮವಾರ ಹುಬ್ಬಳ್ಳಿಗೆ ಜಿ.ಪರಮೇಶ್ವರ ಅವರು ಭೇಟಿ ನೀಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲೇ ಕಾರನ್ನು ಮುತ್ತಿಕೊಂಡು ತಡೆ ನೀಡಲಾಯಿತು.

ಡಿಸಿಪಿ ಅವರ ವರ್ಗಾವಣೆ ರದ್ದು ಮಾಡುವಂತೆ 'ಆದಿ ಜಾಂಬವ ಸಂಘಟನೆ'ಯಿಂದ ಪ್ರತಿಭಟನೆ ವಿಮಾನ ನಿಲ್ದಾಣದಲ್ಲಿ ಸಚಿವ ಕಾರಿನ ಮುಂದೆ ಪ್ರತಿಭಟಿಸಿದರು. ಕಾರಿ ಮುಂದೆ ನೆಲದ ಮೇಲೆ ಕೂತು ಡಿಸಿಪಿ ವರ್ಗಾವಣೆಯನ್ನು ಹಿಂಪಡೆಯುವಂತೆ ತಿಳಿಸಿದರು. ತಮ್ಮ ಸಮಾಜದ ಪೊಲೀಸ್ ಅಧಿಕಾರಿ ವರ್ಗಾವಣೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರಿಗೆ ಸಮಾಧಾನ ತಿಳಿಸಿದ ಸಚಿವ
ಪರಿಸ್ಥಿತಿ ಅರಿತ ಜಿ.ಪರಮೇಶ್ವರ ಅವರೇ ಸ್ವತಃ ಕಾರಿನಿಂದ ಕಳಗೆ ಇಳಿದು ಬಂದು ಆದಿಜಾಂಬವ ಸಂಘಟನೆ ಸದಸ್ಯರನ್ನು ಸಮಾಧಾನಪಡಿಸಿದರು. ನಿಮಗೆ ಅನ್ಯಾಯವಾಗಿದ್ದರೆ, ಸರ್ಕಾರದಿಂದ ಇಲಾಖೆ ವತಿಯಿಂದ ಅದನ್ನು ಸರಿಪಡಿಸಲಾಗುವುದು ಎಂದು ಸಚಿವರ ಭರವಸೆ ನೀಡಿದರು. ಬಳಿಕವೇ ಅವರು ಸಚಿವರಿಗೆ ದಾರಿ ಬಿಟ್ಟರು.
ಹುಬ್ಬಳ್ಳಿಯಲ್ಲಿ ನಿರಂತರವಾಗಿ ನಡೆದ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾದರೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಲಾ ಆಂಡ್ ಆರ್ಡರ್ ಡಿಸಿಪಿಯಾಗಿದ್ದ ರಾಜೀವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಯುವತಿ ಅಂಜಲಿ ಅಂಬಿಗೇರ ಅವರ ಕೊಲೆ ಆಗಿದೆ. ಕೊಲೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಮಾತು ಕೇಳಿ ಬಂದವು. ಇದರ ಬೆನ್ನಲ್ಲೆ ಮೃತ ಅಂಜಲಿ ನಿವಾಸಕ್ಕೆ ಸೋಮವಾಋ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿದ್ದಾರೆ. ಅಂಜಲಿ ಕುಟುಂಬಕ್ಕೆ ಜಿ.ಪರಮೇಶ್ವರ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ಸರ್ಕಾರ ಇದೆ ಎಂದು ಧೈರ್ಯ ತುಂಬಿದರು. ಈ ವೇಳೆ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ, ನವಲಗುಂದ ಶಾಸಕ ಎನ್ ಎಚ್.ಕೋನರೆಡ್ಡಿ ಸಾಥ್ ನೀಡಿದರು.
ನಿರಂಜನ್ ಹಿರೇಮಠ್ ಮನೆಗೂ ಭೇಟಿ
ಗೃಹ ಸಚಿವರು ಇಂದು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಂಜಲಿಯವರ ಮನೆ ನಂತರ ತಿಂಗಳ ಹಿಂದೆ ಕೊಲೆಯಾದ ನೇಹಾ ಹಿರೇಮಠ ಅವರ ಮನೆಗೂ ಭೇಟಿ ನೀಡುವ ಸಾಧ್ಯತೆ ಇದೆ. ಮೇಲಾಗೆ ನೇಹಾ ತಂದೆ ನಿರಂಜನ್ ಹಿರೇಮಠ್ ಅವರು ಕಾಂಗ್ರೆಸ್ ನಾಯಕರು, ಪಾಲಿಕೆ ಕಾರ್ಪೋರೇಟರ್ ಆಗಿದ್ದಾರೆ. ಹೀಗಾಗಿ ಇವರ ಮನೆಗೂ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ. ನೇಹಾ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.
ಇಂದೇ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ನಡೆದ ಇತ್ತೀಚಿನ ಹಲವು ಅಪರಾಧ ಪ್ರಕರಣ, ಬೆಳವಣಿಗೆ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಲಿದ್ದಾರೆ. ನಾಳೆ ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮರಳಲಿದ್ದಾರೆ.












Click it and Unblock the Notifications