ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿ ಮನೆಯಲ್ಲಿ ಅಗ್ನಿ ಆಕಸ್ಮಿಕ
ಹುಬ್ಬಳ್ಳಿ, ಅಕ್ಟೋಬರ್ 04 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹುಬ್ಬಳ್ಳಿಯ ಬೈರಿ ದೇವರಕೊಪ್ಪ ಬಳಿಯ ಕುಮಾರಸ್ವಾಮಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
'ಏಕದಂತ ಕೃಪಾ' ಹೆಸರಿನ ನಿವಾಸದಲ್ಲಿ ಶಾರ್ಟ್ ಸರ್ಕಿಟ್ ನಿಂದಾಗಿ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಕೆಲಸಗಾರರು ಈ ಮನೆಯನ್ನು ನೋಡಿಕೊಳ್ಳುತ್ತಿದ್ದು, ಎದುರು ಮನೆಯಲ್ಲಿ ವಾಸವಾಗಿರುವ ಅವರು, ಮನೆಯಲ್ಲಿ ಹೊಗೆ ತುಂಬಿಕೊಂಡಿದ್ದು ನೋಡಿ ಸ್ಥಳಕ್ಕೆ ಧಾವಿಸಿದ್ದಾರೆ.

ಕೆಲಸಗಾರರು ಬರುವ ವೇಳೆಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು. 2 ಸೋಫಾ ಸೆಟ್, ಬೆಡ್ ರೂಮ್ ನಲ್ಲಿರುವ ಬೆಡ್, ಕೆಲವು ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿನ ಕೆಲವು ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಕಲರಲಾಗಿವೆ ಎಂದು ತಿಳಿದುಬಂದಿದೆ.
ಊಟ ಮಾಡಿ, ಮಲಗಲು ಸಿದ್ಧವಾಗುತ್ತಿದ್ದ ಕೆಲಸಗಾರರು, ದಟ್ಟ ಹೊಗೆಯ ನಡುವೆಯೇ ಮನೆಯೊಳಗೆ ತೆರಳಿ, ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಸ್ಥಳೀಯರು ಸಹ ಬೆಂಕಿ ನಂದಿಸಲು ಸಹಕಾರ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ. ಆದರೆ, ಇದುವರೆಗೂ ಅಲ್ಲಿ ವಾಸ್ತವ್ಯ ಹೂಡಿಲ್ಲ. ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಇದಕ್ಕಾಗಿ ಉತ್ತರ ಕರ್ನಾಟಕ ಭಾಗದ ಜನರ ಕ್ಷಮೆ ಕೇಳಿದ್ದರು.












Click it and Unblock the Notifications