Karnataka Rain: ಮಳೆಯ ಆರ್ಭಟ: ಉತ್ತರ ಕರ್ನಾಟಕದಲ್ಲಿ ಕಳೆಗುಂದಿದ ಸೀಗೆ ಹುಣ್ಣಿಮೆ
ಹುಬ್ಬಳ್ಳಿ, ಅಕ್ಟೋಬರ್ 17: ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಸೀಗೆ ಹುಣ್ಣಿಮೆ ಕಳೆಗುಂದಿದೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಸಂಭ್ರಮ ಸಡಗರದ ನಡೆಯಬೇಕಿದ್ದ ಉತ್ತರ ಕರ್ನಾಟಕ ಭಾಗದ ಸೀಗೆಹುಣ್ಣಿಮ ಹಬ್ಬಕ್ಕೆ ಅಷ್ಟೊಂದು ಉತ್ಸಾಹ ಕಂಡು ಬಂದಿಲ್ಲ.
ರೈತರು ತಮ್ಮ ಜಮೀನುಗಳಿಗೆ ತೆರಳಿ ಚರಗ ಚೆಲ್ಲುವುದಕ್ಕೂ ಮಳೆರಾಯ ಅಡ್ಡಿ ಆಗಿದ್ದಾನೆ. ಭಾರೀ ಮಳೆಯಿಂದ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ರೈತರು ತಮ್ಮ ಜಮೀನಿಗೆ ಹೋಗಲಾರದೆ ಪರದಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ರಸ್ತೆ ಪಕ್ಕದಲ್ಲಿ ಐದು ಮಂದಿ ಪಾಂಡವರನ್ನು ಇಟ್ಟು ಚರಗ ಚೆಲ್ಲಿದರು. ಇನ್ನು ಕೆಲವರು ರಸ್ತೆ ಪಕ್ಕದಲ್ಲಿ ಇರುವ ಜಮೀನಿಗೆ ತೆರಳಿ ಕೆರಗ ಚೆಲ್ಲಿದರು. ಇದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದಿದೆ.

ಪ್ರತಿ ವರ್ಷವೂ ರೈತರು ಸೀಗೆ ಹುಣ್ಣಿಮೆಯ ದಿನ ಬಂದು ಬಾಂಧವರನ್ನು ಎತ್ತಿನ ಬಂಡಿಯಲ್ಲಿ ಹಾಗೂ ಟ್ರಾಕ್ಟರ್ ಮೂಲಕ ಹೊಲಕ್ಕೆ ಕರೆದುಕೊಂಡು ಹೋಗಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆದರೆ ಈ ವರ್ಷವೂ ವರುಣನ ಆರ್ಭಟಕ್ಕೆ ಬೆಳೆಯನ್ನು ಶುದ್ಧ ಕಳೆದುಕೊಂಡು ನಿರಾಶೆಯಿಂದ ಹುಲ್ಲಿಗೋ, ಸುರಂ ಬೆಳಗೋ ಎನ್ನುತ್ತಾ ಹೋಳಿಗೆ, ಕಡಬು, ಬಜ್ಜಿ, ಪಲ್ಲೆಯನ್ನು ನೈವೇದ್ಯ ಮಾಡಿ, ದೇವರಿಗೆ ಪೂಜಿಸಿ ಹೊಲಗಳಿಗೆ ಇನ್ನಾದರೂ ನಮ್ಮ ಫಸಲು ಚೆನ್ನಾಗಿ ಬರಲಿ ಎಂದು ಬನ್ನಿ ಗಿಡಕ್ಕೆ ಪೂಜಿಸಿ ಬೇಡಿಕೊಂಡರು.
ಸೀಗೆ ಹುಣ್ಣಿಮೆ ಹಬ್ಬ ಎಂದರೆ ಉತ್ತರ ಕರ್ನಾಟಕದ ರೈತರ ಕುಟುಂಬಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಕಂಬಳಿ ಹೊದ್ದು, ತಲೆ ಮೇಲೆ ಬಿದಿರಿನ ಬುಟ್ಟಿಯಲ್ಲಿ ಕರಿದ ಖಾದ್ಯ, ತಿಂಡಿ ತಿನಿಸು, ಪೂಜಾ ಸಾಮಗ್ರಿ ಇಟ್ಟುಕೊಂಡು ಹೋಗುವುದು ಸಾಮಾನ್ಯ. ಆದರೆ ಈ ನೈವೇದ್ಯ ತಮ್ಮ ತೆಗೆದುಕೊಂಡು ಹೋಗಲು ಸರಿಯಾಗಿ ಆಗುತ್ತಿರಲಿಲ್ಲ. ಹೀಗಾಗಿ ಕೆಲ ರೈತರು ಎತ್ತಿನ ಬಂಡಿಯಲ್ಲಿ ಸಾಗಿದರೆ, ಮತ್ತೆ ಕೆಲವರು ಸೈಕಲ್, ದ್ವಿಚಕ್ರ ವಾಹನ, ಟ್ರಾಕ್ಟರ್, ಕಾರು ಇನ್ನಿತರೆ ವಾಹನದಲ್ಲಿ ಹೊಲಕ್ಕೆ ತೆರಳುತ್ತಾರೆ. ಈ ಬಾರಿ ವರುಣ ಅದಕ್ಕೂ ಅವಕಾಶ ನೀಡಿಲ್ಲ.

ಸೀಗೆ ಹುಣ್ಣಿಮೆ ಹಬ್ಬ ಆಚರಣೆ ಹೇಗೆ..?
ಗ್ರಾಮೀಣ ಭಾಗದಲ್ಲಿ ಸೀಗೆ ಹುಣ್ಣಿಮೆ ಹಬ್ಬ ಆಚರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಹಬ್ಬದಂದು ಹೊಲಗಳಿಗೆ ತೆರಳಿ ಬನ್ನಿ ಮರದ ಪಕ್ಕ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ವಿಭೂತಿ, ಕುಂಕುಮ, ಭಂಡಾರ, ಹಚ್ಚಿ ಹೂ ಮುಡಿಸಿ, ಹಂಗನೂಲ ತೊಡಿಸಿ, ಎಲೆ ಅಡಿಕೆ, ಜೋಳದ ದಂಟು ಇಟ್ಟು ಪೂಜೆ ಮಾಡುತ್ತಾರೆ. ವಿಶೇಷ ಖಾದ್ಯಗಳ ನೈವೇದ್ಯ ಅರ್ಪಿಸಲಾಗುತ್ತದೆ. ಹೊಲದ ತುಂಬ 'ಹುಲಗೋ ಸುರಾಂಬ್ಲೋ' ಎನ್ನುತ್ತ ಚರಗ ಚೆಲ್ಲಲಾಗುತ್ತದೆ. ನಂತರ ಎಲ್ಲರೂ ಕುಳಿತು ಭೋಜನ ಸವಿಯಯತ್ತಿದ್ದರು.
ಭೂತಾಯಿಯ ಸೀಮಂತ ಕಾರ್ಯಕ್ಕೆ ಜೋಳದ ಕಡುಬು, ವಡೆ, ಮೊಸರು, ಪುಂಡಿಪಲ್ಯೆ, ಕಾಳಿನ ಪಲ್ಯೆ, ಮೆಣಸಿನಕಾಯಿ, ಚಟ್ನಿ, ಮೊಸರು, ಚಿತ್ರಾನ್ನ, ಹುರಕ್ಕಿ ಹೋಳಿಗೆ, ಚಕ್ಕುಲಿ, ಕೋಡುಬಳೆ, ಚಪಾತಿ, ಶೇಂಗಾಚಟ್ನಿ, ಕುಂಬಳ ಪಲ್ಯೆ, ಬದನೆ ಪಲ್ಯೆ, ಚವಳಿ ಪಲ್ಯೆ, ಅನ್ನದ ಬಾನ, ಮಡಿಕೆಕಾಳು ಪಲ್ಯೆ, ಕಿಚಡಿ ತಯಾರಿಸಿ ಎಡೆ ಹಿಡಿದು ಚರಗ ಚೆಲ್ಲುವುದು ವಿಶೇಷ.
ಗ್ರಾಮೀಣ ಭಾಗದಲ್ಲಿ ಸೀಗೆ ಹುಣ್ಣಿಮೆಯನ್ನು ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾರೆ. ಭೋಜನ ಸವಿದ ನಂತರ ಹಿರಿಯರು ತಾಂಬೂಲ ತಿನ್ನುತ್ತ ಮರದ ನೆರಳಲ್ಲಿ ವಿಶ್ರಾಂತಿ ಪಡೆದರೆ, ಮಹಿಳೆಯರು ಹಾಡಿನ ಬಂಡಿ ಕಟ್ಟಿ ಹಾಡುತ್ತಾರೆ. ಮಕ್ಕಳು, ಯುವಕರು ಗಾಳಿಪಟ ಹಾರಿಸಿ ಸಂಭ್ರಮಿಸುವ ಹಬ್ಬಕ್ಕೆ ಈ ಬಾರಿ ಮಳೆರಾಯ ಅಡ್ಡಿ ಆದ ಬಗ್ಗೆ ರೈತ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications