ದೇವರು ವರ, ಶಾಪವನ್ನೂ ಕೊಡುವುದಿಲ್ಲ ಬದಲಿಗೆ ಅವಕಾಶ ಮಾತ್ರ ಕೊಡ್ತಾನೆ: ಡಿ.ಕೆ.ಶಿ ಹೀಗೆ ಹೇಳಿದ್ದೇಕೆ?
, ಮೇ, 31: ನಾವು ಪ್ರತಿಯೊಂದು ಹಂತದಲ್ಲೂ ಬಿಜೆಪಿ ಸರ್ಕಾರದ ತಪ್ಪುಗಳನ್ನು ಮುಂದಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ಇವತ್ತು ನಮಗೆ ದೊಡ್ಡ ಅವಕಾಶ ಸಿಕ್ಕಿದೆ. ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿಯಲ್ಲಿ ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹುಬ್ಬಳ್ಳಿ-ಧಾರವಾಡ ಮಾಧ್ಯಮದ ಮಿತ್ರರಿಗೆ ಅಭಿನಂದನೆಗಳು. ಸಮಾಜಕ್ಕೆ ಸತ್ಯ ಸಂಗತಿ, ಎಲ್ಲ ವರ್ಗದ ಜನರನ್ನು ರಕ್ಷಣೆ ನೀವು ಮಾಡಿದ್ದೀರಿ. ನಾನು ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಭೇಟಿ ಕಾರ್ಯಕ್ರಮವನ್ನು ಮಾತ್ರ ಹಾಕಿಕೊಂಡಿದ್ದೇನೆ. ಬಿ ಫಾರಂ ಕೊಟ್ಟ ಮೇಲೆ ಜಗದೀಶ್ ಶೆಟ್ಟರ್ ಜೊತೆ ಮಾತಾಡಿರಲಿಲ್ಲ. ಆಗ ನಾನು ಪ್ರಚಾರದಲ್ಲಿ ಕಾರ್ಯನಿರತನಾಗಿದ್ದೆ ಎಂದರು.

ಹಾಗೆಯೆ ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಹಾಗೂ ಗುಬ್ಬಿ ಶ್ರೀನಿವಾಸ್ ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಅವರಿಂದ ಬದಲಾಗಣೆ ಆಯ್ತು. ಇವತ್ತು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ, ನಾಳೆ ಸಚಿವ ಸಂಪುಟ ಸಭೆ ಇದೆ. ನಾವು ನುಡಿದಂತೆ ನಡೆಯುತ್ತೇವೆ. ಶೆಟ್ಟರ್ ಜೊತೆ ನಾವು ಇರುತ್ತೇವೆ. ನಮಗೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೇಶ ಹೇಳಬೇಕಿತ್ತು. ಹಾಗೆಯೇ ಶೆಟ್ಟರ್‌ಗೆ ಸಂದೇಶ ತಲುಪಿಸಿದ್ದೇವೆ ಎಂದರು.
ಇನ್ನು ಜಗದೀಶ್ ಶೆಟ್ಟರ್‌ಗೆ ಸ್ಥಾನ ಮಾನ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ. ಪಕ್ಷ ಅವರ ಜೊತೆ ಇದೆ. ನಾವೇನು ಗೌಪ್ಯವಾಗಿ ಇಡುವುದಿಲ್ಲ. ಎಲ್ಲವನ್ನೂ ನಿಮಗೆ ಹೇಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸೋಲಿನ ಆತ್ಮಾವಲೋಕನ ಮಾಡಿಕೊಂಡ ಶೆಟ್ಟರ್
ಅಲ್ಲದೆ ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಬಹುದೊಡ್ಡ ಹೊಡೆತವನ್ನು ಕೊಟ್ಟಿದೆ. ಮಾಜಿ ಸಿಎಂ ಅವರನ್ನು ಸೋಲಿಸುವ ನಿಟ್ಟಿನಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡಿರುವ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿದೆ. ಆದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರಾಭವಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಈಗ ಶೆಟ್ಟರ್ ಮುಂದಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ನಿಜಕ್ಕೂ ಹೈ ವೋಲ್ಟೇಜ್ ಕಣವಾಗಿ ಪರಿಣಮಿಸಿತ್ತು. ಶಿಷ್ಯನ ವಿರುದ್ಧವೇ ಗುರುವಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲನ್ನು ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹುಬ್ಬಳ್ಳಿಯ ರಾಯ್ಕರ್ ಗೇಸ್ಟ್ ಹೌಸ್ ನಲ್ಲಿ ಕಾರ್ಯಕ್ರಮ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸೋಲಿನ ಕಾರಣವನ್ನು ಪರಾಮರ್ಶೆ ಮಾಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯವನ್ನು ಮಾಡಿದ್ದಾರೆ.
ಇನ್ನೂ ಕಾರ್ಯಕ್ರಮಕ್ಕೆ ಪ್ರಫುಲ್ ಚಂದ್ರ ರಾಯನಗೌಡ್ರ, ಜಕ್ಕಪ್ಪನವರ, ಮಹೇಂದ್ರ ಸಿಂಘಿ, ಅನೀಲ್ ಕುಮಾರ್ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ನೂರಾರು ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಮೂಲಕ ವಿನೂತನ ರೀತಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಾಯಿತು.
ಒಟ್ಟಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲಿಸಲು ಹೋಗಿ ರಾಜ್ಯದಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದೆ ಎನ್ನುವಂತಹ ಮಾತನ್ನು ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪುನರ್ ಉಚ್ಚರಿಸುವ ಮೂಲಕ ಶೆಟ್ಟರ್ ಸೋಲಿನ ಪರಾಮರ್ಶೆ ಮಾಡಿಕೊಂಡಿದ್ದಾರೆ.












Click it and Unblock the Notifications