ಜಯಲಲಿತಾ ಒಂದು ರುಪಾಯಿ, ಸಿದ್ದರಾಮಯ್ಯ ಎರಡು ರುಪಾಯಿ...

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್ 9: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ಶುಕ್ರವಾರ ಕರೆ ನೀಡಿದ ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲಿ ಭಾರಿ ಸ್ಪಂದನೆ ಸಿಕ್ಕಿತು.

ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಹೋರಾಟಗಾರರು ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಕೆಲ ಪ್ರತಿಭಟನಾಕಾರರು ಜಯಲಲಿತಾ, ಸಿದ್ಧರಾಮಯ್ಯ ಮತ್ತು ಎಂ.ಬಿ. ಪಾಟೀಲ ಅವರ ಫೋಟೋ ಇಟ್ಟು ಅವರನ್ನು ಹರಾಜು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.[ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]

Different organisations participated in bandh

ಜಯಲಲಿತಾ ಫೋಟೋಗೆ 1 ರು.ನಿಂದ 1 ಸಾವಿರ ರು. ಹರಾಜು ಮೊತ್ತ ಇಡಲಾಗಿತ್ತು. ಆದರೆ ಯಾರೂ ಜಯಲಲಿತಾ ಫೋಟೋ ಖರೀದಿಸಲಿಲ್ಲ. ಸಿದ್ಧರಾಮಯ್ಯ ಮತ್ತು ಎಂ.ಬಿ.ಪಾಟೀಲ ಅವರ ಫೋಟೋಗಳನ್ನು 2, 5 ರು.ಗೆ ಖರೀದಿಸಿ, ನಂತರ ಎಲ್ಲ ಫೋಟೋಗಳನ್ನು ಸುಟ್ಟು ಹಾಕಲಾಯಿತು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸಿದ್ಧರಾಮಯ್ಯ ಹಾಗೂ ಎಂ.ಬಿ.ಪಾಟೀಲರ ಪ್ರತಿಕೃತಿಯನ್ನು ದಹಿಸಿ, ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.[ಕಾವೇರಿ ವಿವಾದ : ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ]

Different organisations participated in bandh

80ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಇಡೀ ನಗರ ಸ್ತಬ್ಧವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದಿದ್ದರೂ ಅಘೋಷಿತ ಬಂದ್ ನಂತೆ ವಿದ್ಯಾರ್ಥಿಗಳು ಶಾಲೆಗೆ ತೆರಳಲಿಲ್ಲ. ನಗರದ ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ಮಾಡಲಾಗಿತ್ತು. ಸಾರಿಗೆ ನಿಗಮದ ಬಸ್ ಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನರು ಮನೆಯಲ್ಲಿಯೇ ಉಳಿಯುವಂತಾಗಿತ್ತು.

ಗಣೇಶ ಚತುರ್ಥಿಯ ಐದನೇ ದಿನವಾದ ಶುಕ್ರವಾರ ಕೆಲ ಮನೆಗಳಲ್ಲಿ, ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನೆ ಸಂಜೆ ಮಾಡಬೇಕಾಗಿರುವುದರಿಂದ ಪ್ರತಿಭಟನೆಯನ್ನು ಮಧ್ಯಾಹ್ನಕ್ಕೆ ಮೊಟಕುಗೊಳಿಸಲು ಮೊದಲೇ ನಿರ್ಧರಿಸಲಾಗಿತ್ತು. ಮಧ್ಯಾಹ್ನದ ನಂತರ ಸಾರಿಗೆ ಬಸ್ ಗಳು ಸಂಚರಿಸುತ್ತಿವೆ.[ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

Different organisations participated in bandh

ದೂರದ ಊರಿನ ಬಸ್ ಗಳು ಕೂಡ ಸಂಚಾರ ಆರಂಭಿಸಿದ್ದು, ಖಾಸಗಿ ವಾಹನಗಳ ಸಂಚಾರ ಸಂಜೆ ನಂತರ ಚುರುಕಾಗಲಿದೆ. ಚಿತ್ರಮಂದಿರ ಮತ್ತು ಶಾಪಿಂಗ್ ಮಾಲ್ ಗಳು ಬಂದ್ ಹಿನ್ನೆಲೆಯಲ್ಲಿ ಹೊರಗಡೆ ಬೋರ್ಡ್ ಹಾಕಿದ್ದವು.

ರಾಜ್ಯಕ್ಕೆ ಮತ್ತೆ ಮತ್ತೆ ಅನ್ಯಾಯ: ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನೀರಿನ ಸಮಸ್ಯೆಯಿಂದ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಇದರಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.[ಪೊಲೀಸರಿಂದ ಗಾಳಿಯಲ್ಲಿ ಗುಂಡು, ಅಶ್ರುವಾಯು, ಲಾಠಿ ಪ್ರಹಾರ]

Different organisations participated in bandh

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ರೈತರು ತೊಂದರೆಯಲ್ಲಿದ್ದಾಗ ರಾಜ್ಯ ಸರಕಾರ ನೀರು ಬಿಟ್ಟಿಲ್ಲ. ಇದರಿಂದ ನೂರಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಕೋರ್ಟ್ ಆದೇಶ ಅವೈಜ್ಞಾನಿಕವಾಗಿದ್ದು, ಇದರಿಂದಲೇ ಜನರು ರೊಚ್ಚಿಗೆದ್ದಿದ್ದಾರೆ ಎಂದರು.

ಮಳೆ ಕೊರತೆಯಿಂದ ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆ ಒಣಗುತ್ತಿದೆ. ಕೆಲವೆಡೆ ನೀರಿಲ್ಲದೆ ಭತ್ತವನ್ನೇ ನಾಟಿ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ಮತ್ತು ಸುತ್ತಮುತ್ತಲಿನ ರಾಜ್ಯಗಳು ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಜನರ ಹೋರಾಟವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತವೇ ಸಂಭವಿಸಬಹುದು ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Different organisations participated in bandh in Hubballi. Bandh called off in afternoon. Ex chief minister H.D.Kumaraswamy and other BJP leaders participated in strike.
Please Wait while comments are loading...