2nd PUC Results 2025: ಕಡುಬಡತನಕ್ಕೆ ಸೆಡ್ಡು ಹೊಡೆದ ನಾಗವೇಣಿ: ದ್ವಿತೀಯ ಪಿಯುಸಿಯಲ್ಲಿ ವಿಶೇಷ ಸಾಧನೆ
ಹುಬ್ಬಳ್ಳಿ, ಏಪ್ರಿಲ್ 10: ತನ್ನ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಗೋಪನಕೊಪ್ಪದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 593 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾಳೆ. ತನ್ನ ಸ್ವಂತ ಶ್ರಮದಿಂದಲೇ ಗರಿಷ್ಠ ಅಂಕ ಗಳಿಸಿರುವ ನಾಗವೇಣಿಯನ್ನು ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಗ್ರಹ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.
ಬಳಿಕ ನಾಗವೇಣಿಯ ಶ್ರಮ ಹಾಗೂ ಶ್ರದ್ಧೆ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿ ಸಾಕಷ್ಟು ಕಡುಬಡತನ ಇದ್ದರೂ ನಿರಂತರ ಪರಿಶ್ರಮದಿಂದ ರಾಜ್ಯಕ್ಕೆ 5ನೇ ಸ್ಥಾನ ಪಡೆಯುವ ಮೂಲಕ ಕಲಿತ ಶಾಲೆಗೆ ವಿಶೇಷವಾಗಿ ಧಾರವಾಡ ಜಿಲ್ಲೆಯ ಗೌರವ ಹೆಚ್ಚಿಸಿದ್ದಾಳೆ. ಸರ್ಕಾರಿ ಶಾಲೆಗಳನ್ನು ಕಡಗಣಿಸಬೇಡಿ ಎಂಬ ಸಂದೇಶವನ್ನು ಪಾಲಕರಿಗೆ ಈ ವಿದ್ಯಾರ್ಥಿನಿ ತನ್ನ ಸಾಧನೆ ಮೂಲಕ ತೋರಿಸಿದ್ದಾಳೆ ಎಂದರು.

ಮನೆಯಲ್ಲಿ ಕಡು ಬಡತನ ವಿಶೇಷ ಚೇತನ ಗಾರೆ ಕೆಲಸ ಮಾಡುವ ತಂದೆ, ಮನೆಗೆಲಸ ಮಾಡುವ ತಾಯಿ, ಇಂತಹ ಕಷ್ಟದ ಮಧ್ಯೆಯು ತನ್ನ ನಿರಂತರ ಪರಿಶ್ರಮದಿಂದ ನಾಗವೇಣಿ ಅಸಾಧ್ಯ ಸಾಧನೆ ಮಾಡಿ ತನ್ನ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸಿದ್ದಾಳೆ. ಜೊತೆಗೆ ಕಲಿತ ಕಾಲೇಜಿನ ಕೀರ್ತಿಯನ್ನು ಸಹ ಹೆಚ್ಚಿಸಿದ್ದಾಳೆ. ಕಲಿಸಿದ ಸಿಬ್ಬಂದಿಯ ಗೌರವ ಹೆಚ್ಚಿಸುವ ಮೂಲಕ ಹೆಮ್ಮೆ ತರುವ ಕೆಲಸ ನಾಗವೇಣಿಯಿಂದ ಸಾಧ್ಯವಾಗಿದೆ. ಅದಕ್ಕಾಗಿ ನಾಗವೇಣಿಗೆ ಹಾಗೂ ಅವರ ಹೆತ್ತ ತಂದೆ ತಾಯಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಅವಳ ಓದಿಗೆ ಎಲ್ಲಾ ರೀತಿಯಿಂದ ಸಹಕರಿಸಿ ಉತ್ತಮ ಬೋಧನೆ ಮಾಡಿದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಾಗವೇಣಿಯ ಮುಂದಿನ ಅಧ್ಯಯನಕ್ಕೆ ನಾನು ಮತ್ತು ನಮ್ಮ ಅವ್ವ ಸೇವಾ ಟ್ರಸ್ಟ್ ಸದಾ ಕಾಲ ಅಭಯದ ಹಸ್ತ ಚಾಚುತ್ತದೆ ಎಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಭರವಸೆ ನೀಡಿದರು.

ದೊಡ್ಡದಾದ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಮಾಡು. ನಿಮ್ಮಂತ ಪ್ರತಿಭೆಗಳಿಗೆ ಸಮಾಜ ಸದಾಕಾಲ ಸ್ಪಂದಿಸುತ್ತದೆ . ಬಡತನ ಇದ್ದಲ್ಲಿ ಭಗವಂತನ ಆಶೀರ್ವಾದ ಇದ್ದೇ ಇರುತ್ತದೆ. ಕಷ್ಟಪಟ್ಟು ಕುಟುಂಬ ಸಾಕಿ ನಿನ್ನ ಅಧ್ಯಯನಕ್ಕೆ ಎಲ್ಲಿಯೂ ತೊಂದರೆ ಬರದಂತೆ ನೋಡಿಕೊಂಡ ತಂದೆ ತಾಯಿಗಳ ನೋವುಗಳನ್ನು ದೂರ ಮಾಡುವುದು ನಿನ್ನಿಂದ ಸಾಧ್ಯ ಎಂಬ ಭರವಸೆ ನಿನ್ನ ಹೆತ್ತವರಿಗೆ ಮೂಡಿದೆ, ಅವರಿಗೆ ನಿರಾಶೆ ಮಾಡಬೇಡ ಎಂದು ನಾಗವೇಣಿಗೆ ಕಿವಿ ಮಾತುಗಳನ್ನು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳಿದರು.












Click it and Unblock the Notifications