ಹೋಟೆಲ್‌ನಲ್ಲಿ ಸಭೆ ನಡೆಸದ ಸಿದ್ದರಾಮಯ್ಯ-ಕುಮಾರಸ್ವಾಮಿ
ಹುಬ್ಬಳ್ಳಿ, ಮೇ 14: ಕುಂದಗೋಳ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ತೆರಳಿರುವ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಸಭೆ ನಡೆಸಲಿದ್ದಾರೆ ಎಂಬ ನಂಬಿಕೆ ಹುಸಿಯಾಗಿದೆ. ಆದರೆ, ಇಬ್ಬರೂ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರು ತಂಗಿದ್ದ ಹೋಟೆಲ್‌ನಲ್ಲಿಯೇ ಸಿದ್ದರಾಮಯ್ಯ ಕೂಡ ಇದ್ದರು. ಬೆಳಿಗ್ಗೆ ಇಬ್ಬರೂ ಸಭೆ ನಡೆಸಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೂಡ ಖಚಿತಪಡಿಸಿದ್ದರು.
ಕುಮಾರಸ್ವಾಮಿ ಅವರಿಗಿಂತ ಮೊದಲೇ ಸಿದ್ದರಾಮಯ್ಯ ಹೋಟೆಲ್‌ನಿಂದ ಹೊರಕ್ಕೆ ಬಂದಿದ್ದಾರೆ. ಬಳಿಕ ಕುಂದಗೋಳದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಅಲ್ಲಿಂದ ಹೊರಟ ಬಳಿಕ ಇಬ್ಬರೂ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಅವರು ವಿಶ್ವನಾಥ್ ಅವರ ಹೇಳಿಕೆಗಳ ಕುರಿತು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಬ್ಬರ ನಡುವೆ ಸಂಧಾನ ಮಾಡಿದ್ದು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಹೋಟೆಲ್‌ನಲ್ಲಿ ಸಭೆ ನಡೆಸಿ ಚರ್ಚಿಸಲಿದ್ದಾರೆ ಎಂದು ಹೊರಟ್ಟಿ ತಿಳಿಸಿದ್ದರು. ಈ ಸಭೆಯಲ್ಲಿ ಜಮೀರ್ ಅಹ್ಮದ್, ಬಂಡೆಪ್ಪ ಕಾಶೆಂಪೂರ್, ಹೊರಟ್ಟಿ ಹಾಗೂ ಮತ್ತಿತರರು ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇಬ್ಬರೂ ಹೋಟೆಲ್‌ನಲ್ಲಿ ಮುಖಾಮುಖಿಯಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications