ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರಕ್ಕಾಗಿ ಕೈ ಸರ್ಕಸ್: ಜಗದೀಶ್ ಶೆಟ್ಟರ್ ಹೆಗಲಿಗೆ ಬಿಗ್ ಟಾಸ್ಕ್
ಹುಬ್ಬಳ್ಳಿ, ಜೂನ್ 14: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಕಾವು ರಂಗೇರಿದೆ. ಕಮಲ ಪಾಳೆಯದಲ್ಲಿರುವ ಪಾಲಿಕೆ ಅಧಿಕಾರವನ್ನು ತನ್ನ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದ್ದು, ಈಗಾಗಲೇ ಭರ್ಜರಿ ಸಿದ್ಧತೆ ಆರಂಭಿಸಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಯರ್ ಟಾಸ್ಕ್ ನೀಡಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇದೇ ಜೂನ್ 20ರಂದು ನಡೆಯಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನಂಬರ್ ಗೇಮ್ ಇಲ್ಲ. ಆದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಬೇಕು ಎನ್ನುವ ಟಾಸ್ಕ್ ನೀಡಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ ಅವರಿಗೆ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಳೆದ ಒಂದು ವಾರದ ಹಿಂದೆ ಮನೆಗೆ ಭೇಟಿ ನೀಡಿದ ವೇಳೆ ಟಾಸ್ಕ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಸ್ವತಃ ಮಾತನಾಡಿ ತಮ್ಮ ಪರವಾಗಿ ಪಾಲಿಕೆಯ 11 ಬಿಜೆಪಿ ಸದಸ್ಯರು ಇದ್ದಾರೆ. ಅಲ್ಲದೇ ನಾನು ಬಿಜೆಪಿ ಬಿಡುವುದರಿಂದ ಒಂದು ಫ್ಲಡ್ ಗೇಟ್ ಓಪನ್ ಆಗುವುದಿದೆ. ಅದನ್ನು ಆದಷ್ಟು ಶೀಘ್ರದಲ್ಲಿ ನೀವು ನೋಡುತ್ತೀರಿ ಎನ್ನುವ ದೂರ ದೃಷ್ಟಿ ಹೇಳಿಕೆಯನ್ನು ಶೆಟ್ಟರ್ ನೀಡಿದ್ದರು. ಹೀಗಾಗಿ ದಿನಾಂಕ 20ರಂದು ಜಗದೀಶ್ ಶೆಟ್ಟರ್ ಪರವಾಗಿ ಇರುವ ಬಿಜೆಪಿ ಸದಸ್ಯರು ಯಾರು ಎನ್ನುವ ಕುತೂಹಲಕ್ಕೆ ತೆರೆ ಬೀಳುವ ದಿನವಾಗಿದೆ. ಜಗದೀಶ್ ಶೆಟ್ಟರ್ ಬೆಂಬಲಿಗರಾಗಿರುವ ಕೆಲ ಬಿಜೆಪಿ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್‌ಗೆ ಬೆಂಬಲಿಸುವ ಸಾಧ್ಯತೆ ಕೂಡ ಇದೆ ಎಂದು ದಟ್ಟವಾಗಿ ಹೇಳಲಾಗುತ್ತಿದೆ.
ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 82 ಸದಸ್ಯರ ಬಲ ಹೊಂದಿದೆ. ಬಿಜೆಪಿಯ 39 , ಕಾಂಗ್ರೆಸ್‌ನ 33 , ಎಐಎಂಐಎಂನ 3 , ಜೆಡಿಎಸ್‍ನ 1 ಹಾಗೂ 6 ಜನ ಪಕ್ಷೇತರರಿದ್ದಾರೆ. ಈ ಹಿಂದೆ ಐವರು ಪಕ್ಷೇತರರು ಹಾಗೂ ಜೆಡಿಎಸ್‌ನ ಮತ್ತೊಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು.
ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಗೆಲುವಿನಿಂದ ಕಾಂಗ್ರೆಸ್ ಮತ ಬ್ಯಾಂಕ್ ಸಂಖ್ಯೆ 34ಕ್ಕೆ ಏರಿದೆ. ಅಲ್ಲದೇ ಪಕ್ಷೇತರರು ಕೂಡ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ. ಜಗದೀಶ್ ಶೆಟ್ಟರ್ ತಂತ್ರದಿಂದ ಮ್ಯಾಜಿಕ್ ನಡೆದರೆ ಸುಲಭವಾಗಿ ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.












Click it and Unblock the Notifications