ಚಂದ್ರಶೇಖರ ಗುರೂಜಿ ಹತ್ಯೆ ಹಿಂದೆ 'ಕೈ' ನಾಯಕನ ಕೈವಾಡ?
ಹುಬ್ಬಳ್ಳಿ, ಅಕ್ಟೋಬರ್, 09: ವಾಸ್ತು ಶಾಸ್ತ್ರಜ್ಞ, ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಸ್ಫೋಟಕ ತಿರುವು ಪಡೆಯುತ್ತಿದೆ. ಗುರೂಜಿ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದಿದ್ದು ಬೇನಾಮಿ ಆಸ್ತಿ ವಿಚಾರದಲ್ಲೇ ಅನ್ನುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಗುರೂಜಿ ಬಸವರೆಡ್ಡಿ ಔಡರಡ್ಡಿ ಹೆಸರಲ್ಲಿ ಗೋಕುಲ ಗ್ರಾಮದ ಸರ್ವೆ ನಂಬರ್ 166/1ರಲ್ಲಿ ಇದ್ದ 5 ಎಕರೆ 11 ಗುಂಟೆ ಬೆನಾಮಿ ಆಸ್ತಿಯನ್ನು ಮಾರಾಟ ಮಾಡಿದ್ದರು. ಗುರೂಜಿಗೆ ಗೊತ್ತಾಗದಂತೆ ಬಸವರಡ್ಡಿ ಜೊತೆ ಸೇರಿಕೊಂಡು ಮಹಾಂತೇಶ್ ಶಿರೂರು, ಮಂಜುನಾಥ ಮರೇವಾಡ್ ಮಾರಾಟ ಮಾಡಿದ್ದರು. ಮಹಾಂತೇಶ್ ಶಿರೂರು ಹಾಗೂ ಗುರೂಜಿ ಬೇನಾಮಿ ಆಸ್ತಿ ಖರೀದಿಸಿದ್ದ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಮಧ್ಯೆ ನಡೆದ ವಾಟ್ಸಪ್ ಮೆಸೇಜ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಈ ಕುರಿತು ಗುರೂಜಿ ಹಾಗೂ ತಮ್ಮ ಶಿಷ್ಯರೊಂದಿಗೆ ಆಗಾಗ ಜಗಳ ಆಗುತ್ತಿತ್ತು ಎಂದು ಗೊತ್ತಾಗಿದೆ. ಜುಲೈ 5ರಂದು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಹುಬ್ಬಳ್ಳಿ ಪೊಲೀಸರು 800 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಂದ್ರಶೇಖರ ಗುರೂಜಿ ಕೊಲೆಗೆ ಸಹೋದರರ ಮಕ್ಕಳೇ ಕಾರಣವಂತೆ ಚಾರ್ಜ್ ಶೀಟ್‌ನಲ್ಲಿ ಅಸಲಿ ಸತ್ಯ ಬಯಲಾಗಿದೆ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಬಂದರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ. 2014ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಎಂದು ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು.

ಗುರೂಜಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಇದರ ಮಧ್ಯೆ ಗುರೂಜಿ ಹತ್ಯೆ ಪ್ರಕರಣದಲ್ಲಿ ಇದೀಗ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡ ದೀಪಕ್ ಚಿಂಚೋರೆ ಹೆಸರು ಕೇಳಿ ಬರುತ್ತಿದೆ. "ನಮಸ್ಕಾರ ಅಣ್ಣಾವ್ರೆ, ನೀವು ಗುರೂಜಿಯನ್ನು ಹೊಡೆಯುವುದಕ್ಕೆ ಡೀಲ್ ಕೊಟ್ಟಿದ್ದೀರಲ್ಲ, ಅದರ ಬಗ್ಗೆ ಮಾತನಾಡಬೇಕಿತ್ತು" ಹೀಗೆ ಸಂದೇಶವೊಂದು ವೈರಲ್ ಆಗಿದೆ. ಇದು ಸರಳ ವಾಸ್ತು ಚಂದ್ರಶೇಖರ ಗುರೂಜಿಯ ಹತ್ಯೆಗೆ ಮುನ್ನ ಮಹಾಂತೇಶ್ ಶಿರೂರು ಗುರೂಜಿ ಧಾರವಾಡ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಕಳಿಸಿದ ವಾಟ್ಸಪ್ ಸಂದೇಶ ಆಗಿದೆ. ಇದೀಗ ಈ ಸಂದೇಶ ಹರಿದಾಡುತ್ತಿದ್ದು, ಎಲ್ಲೆಡೆ ವೈರಲ್ ಆಗಿದೆ.

800 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಹುಬ್ಬಳ್ಳಿ ಪೊಲೀಸರು ಹಂತಕರ ಬಂಧನದ ಬಳಿಕ 800 ಪುಟಗಳು ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಗುರೂಜಿ ಹತ್ಯೆಯ ಹಿಂದಿರುವ ಸತ್ಯ ಬಯಲಾಗಿದೆ. ಅದರಲ್ಲೂ ಹತ್ಯೆಗೂ 25 ದಿನಗಳ ಮೊದಲೇ ಹಂತಕ ಮಹಾಂತೇಶ್ ಶಿರೂರು ಹಾಗೂ ಗುರೂಜಿ ಬೇನಾಮಿ ಆಸ್ತಿ ಖರೀದಿಸಿದ್ದ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಮಧ್ಯೆ ನಡೆದ ವಾಟ್ಸಪ್ ಚಾಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ. ತನಿಖಾಧಿಕಾರಿಗಳು ಎಲ್ಲ ವಿಚಾರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಟ್ವಿಸ್ಟ್ ಕೊಟ್ಟ ಸಂದೇಶ
ವಾಟ್ಸಪ್ ಮೆಸೇಜ್ ವಿಚಾರವನ್ನು ದೀಪಕ್ ಚಿಂಚೋರೆ ಖುದ್ದಾಗಿ ಚಂದ್ರಶೇಖರ ಗುರೂಜಿ ಭೇಟಿಯಾಗಿ ತಿಳಸಿದ್ದರಂತೆ. ಆದರೆ ಗುರೂಜಿ ಮಾತ್ರ ಹಂತಕರಿಂದ ಎಚ್ಚರವಹಿಸಲೇ ಇಲ್ಲ ಅನ್ನವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಧಾರವಾಡದ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಈ ಆಸ್ತಿಯನ್ನು ತನ್ನ ಆಪ್ತ ತಾನಾಜಿ ಶಿರ್ಕೆ ಹೆಸರಲ್ಲಿ ಖರೀದಿಸಿದ್ದ. ಈ ವಿಚಾರ ಗೊತ್ತಾದ ಬಳಿಕ ಚಂದ್ರಶೇಖರ ಗುರೂಜಿ ಕುಟುಂಬಸ್ಥರು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಗುರೂಜಿ ಹತ್ಯೆ ಹಿಂದಿನ ರಹಸ್ಯ
ಇದರಿಂದಾಗಿ ಆಸ್ತಿ ಮಾರಾಟದಿಂದ ಬರಬೇಕಿದ್ದ ಪೂರ್ತಿ ಹಣ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ ಮರೆವಾಡ ಕೈಗೆ ತಲುಪಿರಲಿಲ್ಲ. ಇದರಿಂದಾಗಿ ಗುರೂಜಿ ಮೇಲೆ ಕೆಂಡಾಮಂಡಲರಾಗಿದ್ದ ಹಂತಕರು, ಕೇಸ್ ವಾಪಸು ಪಡೆಯುವಂತೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಚಂದ್ರಶೇಖರ ಗುರೂಜಿ ಒಪ್ಪಿರಲಿಲ್ಲ. ಇದರಿಂದಾಗಿ ಗುರೂಜಿ ಹತ್ಯೆಯಾಗಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.












Click it and Unblock the Notifications