ಭವಾನಿ ರೇವಣ್ಣಗೆ ಹಾಸನ ಟಿಕೆಟ್ ಕೊಟ್ಟರೆ ಅವರು ಗೆಲ್ಲುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಮಾಹಿತಿ
ಹುಬ್ಬಳ್ಳಿ, ಏಪ್ರಿಲ್, 11: ವಿಧಾನಸಭೆ ಚುನಾವಣೆ ದಿನಾಂಕ ಹತ್ತಿವಾಗುತ್ತಿದ್ದಂತೆ, ಹಾಸನದಲ್ಲಿ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ಜೋರಾಗುತ್ತಲೆ ಇದೆ. ಈಗಾಗಲೇ ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಕೊಡುವುದಿಲ್ಲ, ಬದಲಾಗಿ ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದರು. ಮತ್ತೆ ಇದೀಗ ಈ ಸಂಬಂಧ ಹುಬ್ಬಳ್ಳಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಗಾದರೆ ಆ ಹೇಳಿಕೆ ಏನು ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಸ್ಫೋಟಕ ಹೇಳಿಕೆ ನೀಡಿದ ಎಚ್.ಡಿ.ಕೆ
ಹಾಸನದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಅವರ ನಿರ್ಧಾರ ಅಂತಿಮವಾಗಿದೆ. ಭವಾನಿಯವರು ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಗೆಲ್ಲುವುದಿಲ್ಲ. ಅದಕ್ಕಾಗಿ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಎರಡನೇ ಪಟ್ಟಿ ಬಿಡುಗಡೆಗೆ ವಿಳಂಬ ಏಕೆ?
ನಗರದ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದರು.
ಎರಡು ಕ್ಷೇತ್ರಗಳಲ್ಲಿ ರೇವಣ್ಣ ಟಿಕೇಟ್ ಕೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಶಕುನಿಗಳು ನಮ್ಮ ಕುಟುಂಬವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾಭಾರತ ಕಾಲದಿಂದ ನಡೆದು ಬಂದಿದ್ದೆ ಈಗಲೂ ನಡೆಯುತ್ತಿದೆ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಅನ್ನು ಸಾಮಾನ್ಯ ಕಾರ್ಯಕರ್ತರಿಗೆ ನೀಡುವುದಾಗಿ ಸೂಚನೆ ನೀಡಿದ್ದೆ ಎಂದರು.

ಇನ್ನು ಕುಟುಂಬಕ್ಕೆ ಹಾಸನ ಟಿಕೆಟ್ ಕೊಟ್ಟು ಮಾಧ್ಯಮಗಳಿಗೆ ಆಹಾರ ಆಗಲ್ಲ. ರೇವಣ್ಣನ ಕುಟುಂಬಕ್ಕೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಶಕುನಿಗಳು ದೇವೆಗೌಡರ ಕುಟುಂಬವನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕೆ ವಾಗ್ದಾಳಿ
ಡಿ.ಕೆ.ಶಿವಕುಮಾರ್ ಈಗ ದಲಿತ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಈ ಹಿಂದೆ ದಲಿತ ಕಾರ್ಡ್ ಅನ್ನು ಕೊಟ್ಟಾಗ ಅವರು ಉಪಯೋಗ ಮಾಡಿಕೊಳ್ಳಲಿಲ್ಲ. ಇನ್ನೂ ಬಹುಮತ ಬಂದಿಲ್ಲ, ಈಗಲೇ ಅವರು ದಲಿತ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷ ಕಟ್ಟಿ, ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಓಡಾಡುತ್ತಿದ್ದೇನೆ. ನಮ್ಮವರು ಒಂದು ಕ್ಷೇತ್ರದ ಟಿಕೆಟ್‌ಗಾಗಿ ಚಿಂತೆ ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ನೂರಾರು ಸೀಟ್‌ಗಳ ಚಿಂತೆಯಿದೆ ಎಂದು ವ್ಯಂಗ್ಯವಾಡಿದರು.
ನಮಗೆ ಹಾಸನ ಕ್ಷೇತ್ರದ ಒಂದೇ ಸಿಂಹಾಸನದ ಚಿಂತೆಯಾಗಿದೆ. ಕೆಲವು ಪಕ್ಷಗಳ ಜೊತೆಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ. ಎಐಎಮ್‌ಐಎಮ್ ಪಕ್ಷದವರು ಕೆಲವು ಸೀಟ್ ಕೇಳಿದ್ದಾರೆ. ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಹೇಳಿದರು.
ಶಕುನಿಯಿಂದಲೇ ಕುರುಕ್ಷೇತ್ರದ ಯುದ್ದ ಆಗಿದೆ
ಹಾಗೆಯೇ ಹಾಸನದಲ್ಲಿ ಮನೆ ಹಾಳು ಮಾಡುವ ಶಕುನಿಗಳು ಇದ್ದಾರೆ. ಕುರುಕ್ಷೇತ್ರದ ಯುದ್ದ ಶಕುನಿಯಿಂದಲೇ ಆಗಿದೆ, ಹಾಗೆಯೇ ಇಲ್ಲಿಯೂ ಶಕುನಿಗಳು ತಲೆ ಕೆಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಕುನಿಗಳು ನನ್ನ ಕುಟುಂಬದಲ್ಲಿ ಇಲ್ಲ, ಹಾಸನದಲ್ಲಿ ಇದ್ದಾರೆ. ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡುತ್ತಾರೆ. ಬೇರೆ ಪಕ್ಷದವರು, ಬುದ್ಧಿಜೀವಿಗಳು ಮತ್ತು ಹಿತಶತ್ರುಗಳು ತಲೆ ಕೆಡಿಸಿದ್ದಾರೆ ಎಂದು ಹೇಳಿದ ಅವರು, ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ. ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಸಹ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು ವಿಷಯ ನುಂಗಿಕೊಂಡಿದ್ದೇನೆ. ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ ಸಹ, ತಪ್ಪುಗಳು ಮಾಡದಿದ್ದರೂ ತಲೆ ಮೇಲೆ ಕೈ ಹೊತ್ತುಕುಳಿತುಕೊಳ್ಳುವಂತಾಗಿತ್ತು. ಈಗಲೂ ಅದೇ ರೀತಿ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications