Vande Bharat Express; ಹುಬ್ಬಳ್ಳಿ-ಬೆಂಗಳೂರು ರೈಲಿನ ಅಪ್‌ಡೇಟ್
ಧಾರವಾಡ, ಜನವರಿ 05; ಕರ್ನಾಟಕ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 2023ರಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ಇದೇ ಮಾದರಿ ರೈಲು ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಣೆ ಮಾಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ ತಿಂಗಳಿನಲ್ಲಿ ಚಾಲನೆ ನೀಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಈಗಾಗಲೇ ಹೇಳಿದೆ. ಇದಕ್ಕೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಸಾಗಿವೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ರಾಜ್ಯದ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದೆ. ಈ ರೈಲನ್ನು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಇಲಾಖೆ ಮುಂದೆ ಬೇಡಿಕೆ ಇಡಲಾಗಿದೆ. ಆದರೆ ಈ ಕುರಿತು ಯಾವುದೇ ಅಂತಿಮ ಆದೇಶ ಪ್ರಕಟವಾಗಿಲ್ಲ.
ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಮೈಸೂರು ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಇದು ರಾಜ್ಯದ ಮೊದಲ ಮತ್ತು ದೇಶದ 5ನೇ ವಂದೇ ಭಾರತ್ ರೈಲಾಗಿತ್ತು, ಈ ರೈಲು ಸೇವೆಗೆ ಜನರಿಂದಲೂ ಉತ್ತಮ ಪ್ರಕ್ರಿಯೆ ಸಿಗುತ್ತಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಭಾರತೀಯ ರೈಲ್ವೆ ಮಾರ್ಚ್ 2023ರೊಳಗೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ಅನುಕೂಲವಾಗುವಂತೆ ವಿದ್ಯುದ್ದೀಕರಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಂಡಿದೆ. ರೈಲು ವೇಗವಾಗಿ ಚಲಿಸಲು ಸಹಾಯಕವಾಗುವಂತೆ ತಿರುವುಗಳನ್ನು ಬದಲಾವಣೆ ಮಾಡುವ ಕಾಮಗಾರಿಯೂ ನಡೆಯುತ್ತಿದೆ. ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಸೂಚನೆಯನ್ನು ಸಹ ನೀಡಲಾಗಿದೆ. ಆದರೆ ರೈಲು ಸಂಚಾರ ಯಾವಾಗ? ಎಂಬ ದಿನಾಂಕ ಮಾತ್ರ ನಿಗದಿಯಾಗಿಲ್ಲ.

ತಿರುವುಗಳ ಸಮತಟ್ಟು ಕಾಮಗಾರಿ ಮಾಹಿತಿ
ನೈಋತ್ಯ ರೈಲ್ವೆ ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ. ರೈಲು ಸಂಚಾರವನ್ನು ಶ್ರೀಘ್ರ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಂಶಿ - ಕುಂದಗೋಳ ನಡುವೆ ತಿರುವ ಇರುವ ಕರ್ವ್ (ತಿರುವು) ಸಂಖ್ಯೆ 24 ಅನ್ನು 3.01 ಡಿಗ್ರಿಯಿಂದ 1.6 ಡಿಗ್ರಿಗೆ ಸಮತಟ್ಟಾಗಿ ಬದಲಾಯಿಸಲಾಗಿದೆ. ಈ ಬದಲಾವಣೆಯಿಂದ ರೈಲು 75 ಕಿ. ಮೀ. ಯಿಂದ 120 ಕಿ. ಮೀ. ವೇಗದಲ್ಲಿ ಚಲಿಸಲು ಸಾಧ್ಯವಾಗಲಿದೆ.
ನೈಋತ್ಯ ರೈಲ್ವೆ ಕಾಮಗಾರಿಯ ಫೋಟೋಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈಲ್ವೆ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್
ರೈಲ್ವೆ ಇಲಾಖೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ, ನಮ್ಮ ಧಾರವಾಡ- ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅತ್ಯಾಧುನಿಕ, ಅತಿವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೇಲ್ವೆ ಸಚಿವಾಲಯ ತೀವ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದರು.
ಹಾವೇರಿ ಮತ್ತು ಬ್ಯಾಡಗಿ ರೈಲು ನಿಲ್ದಾಣಗಳ ಮಧ್ಯ ಹಳಿಗೆ ವೇಗ ನಿಯಂತ್ರಕವನ್ನು ತೆಗೆಯುವ ಮತ್ತು ಹೆಚ್ಚಿನ ವೇಗಕ್ಕೆ ಅನಕೂಲವಾಗುವ ಕಾರ್ಯ ಆರಂಭವಾಗಿದೆ. ಇದರಿಂದ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನಕೂಲವಾಗಲಿದೆ ಎಂದು ತಿಳಿಸಿದ್ದರು.

ಕೇಂದ್ರ ರೈಲ್ವೆ ಸಚಿವರ ಸಭೆ
2022ರ ನವೆಂಬರ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯದ ರೈಲು ಯೋಜನೆಗಳನ್ನು ವಿವರ ಪಡೆದಿದ್ದರು.
ಆಗ "ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಲು ಯೋಜಿಸಲಾಗಿದೆ" ಎಂದು ಹೇಳಿದ್ದರು. ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಸಭೆಯಲ್ಲಿ ಸೂಚನೆ ನೀಡಲಾಗಿತ್ತು.

ತಾತ್ಕಾಲಿಕ ವೇಳಾಪಟ್ಟಿ ಸಿದ್ಧ
ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ ತಿಂಗಳಿನಲ್ಲಿ ಚಾಲನೆ ನೀಡುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಇದಕ್ಕಾಗಿ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ಬಳಿ ವಂದೇ ಭಾರತ್ ರೈಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ಸಹ ಭಾರತೀಯ ರೈಲ್ವೆ ಇಲಾಖೆ ಪಡೆದಿದೆ. ರೈಲು ಸಂಚಾರ ಆರಂಭದ ದಿನಾಂಕ, ದರ, ವೇಳಾಪಟ್ಟಿ ಎಲ್ಲವೂ ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications